ಹಾವೇರಿ ಜಿಲ್ಲೆಯಲ್ಲಿ ಸಿನಿಮಾವನ್ನೇ ನೆನಪಿಸುವ ರೀತಿಯಲ್ಲಿ ಚಿನ್ನ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ರಾಣೇಬೆನ್ನೂರು ಶಹರಾ ಪೊಲೀಸರು ಬಂಧಿಸಿದ್ದಾರೆ. ನಕಲಿ ಚಿನ್ನಾಭರಣ ಮತ್ತು ಕೃತಕ QR ಕೋಡ್ ಸೃಷ್ಟಿಸಿ, ಬ್ಯಾಂಡ್ ಜ್ಯುವೆಲರ್ಸ್ ಮಳಿಗೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಕಿಲಾಡಿ ಕಳ್ಳಿಯ ಕೃತ್ಯ ಇದೀಗ ಬೆಳಕಿಗೆ ಬಂದಿದೆ.
ಬಂಧಿತ ಮಹಿಳೆಯನ್ನು ಶ್ರೀದೇವಿ ಕಟ್ಟೆಕಾರ (30) ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯ ನವನಗರ ನಿವಾಸಿಯಾಗಿದ್ದು, ಮಗು ಜೊತೆಯಲ್ಲಿ ಐಷಾರಾಮಿ ಕಾರಿನಲ್ಲಿ ಜ್ಯುವೆಲರಿ ಅಂಗಡಿಗಳಿಗೆ ತೆರಳಿ ಮೊದಲು ನಕಲಿ ಚಿನ್ನಾಭರಣವನ್ನು ತಯಾರಿಸಿಕೊಂಡು ಅದಕ್ಕೆ ತಾನೇ ಸೃಷ್ಟಿಸಿದ QR ಕೋಡ್ ಟ್ಯಾಗ್ ಅಂಟಿಸಿಕೊಂಡು ಬರುತ್ತಿದ್ದಳು.ಅಂಗಡಿಯಲ್ಲಿ ಚಿನ್ನ ವೀಕ್ಷಿಸುವ ವೇಳೆ ಕುಶಲತೆಯಿಂದ ನಕಲಿ ಚಿನ್ನವನ್ನು ಇಟ್ಟು ಅಸಲಿ ಚಿನ್ನವನ್ನು ಕದಿಯುತ್ತಿದ್ದಳು. ಕದ್ದ ಚಿನ್ನವನ್ನು ಅದೇ ದಿನ ಮತ್ತೊಂದು ನಗರದಲ್ಲಿ ಮಾರಾಟ ಮಾಡುವ ಚಾಳಿ ಹೊಂದಿದ್ದಳು ಎನ್ನಲಾಗಿದೆ.
ಬೆನಕಾ ಗೋಲ್ಡ್ ಮಳಿಗೆಯಲ್ಲಿ ಚಿನ್ನ ಮಾರಾಟಕ್ಕೆ ಬಂದಾಗ ಅನುಮಾನ ವ್ಯಕ್ತವಾದ ಹಿನ್ನೆಲೆ ಸಿಬ್ಬಂದಿ ವಿಚಾರಣೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದರು. ಇದೇ ವೇಳೆ ಶಿವಮೊಗ್ಗದ ಭೀಮಾ ಜ್ಯುವೆಲರ್ಸ್‌ನಲ್ಲೂ ಕದ್ದ ಚಿನ್ನವನ್ನು ಮಾರಾಟ ಮಾಡಲು ಯತ್ನಿಸಿದ್ದ ವಿಚಾರ ಬೆಳಕಿಗೆ ಬಂದಿದೆ.
ಪೊಲೀಸರ ತನಿಖೆಯಲ್ಲಿ ಶ್ರೀದೇವಿಯ ಮೋಸದಾಟ ಬಹಿರಂಗವಾಗಿದ್ದು, ಆಕೆಯ ಬಳಿಯಿಂದ ಸುಮಾರು ನಾಲ್ಕು-ಐದು ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ರಾಣೇಬೆನ್ನೂರು ಶಹರಾ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರಿಸಿದ್ದಾರೆ.