ಮ್ಯಾಡ್ರಿಡ್: ಇರಾನ್ ಮೇಲೆ ದಾಳಿ ನಡೆಸುತ್ತಿರುವ ಅಮೆರಿಕಕ್ಕೆ ನಾವು ಸಹಾಯ ಮಾಡುವುದಿಲ್ಲ. ನಮಗೆ ಯುದ್ಧ ಬೇಕಿಲ್ಲ ಎಂದು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರು ಹೇಳಿದ್ದಾರೆ.
ಇರಾನ್ ಮೇಲೆ ವಾಯುದಾಳಿ ನಡೆಸಲು ಸ್ಪೇನ್ ದೇಶದ ವಾಯುನೆಲೆಗಳನ್ನು ಬಳಸಿಕೊಳ್ಳಲು ಅಮೆರಿಕ ಮುಂದಾಗಿತ್ತು. ಆದರೆ, ಸ್ಪೇನ್ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಸ್ಪೇನ್ ನ ಈ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟುವಾಗಿ ಟೀಕಿಸಿದ್ದರು. ಸ್ಪೇನ್ ಜತೆಗಿನ ಎಲ್ಲಾ ರೀತಿಯ ವ್ಯಾಪಾರ ಒಪ್ಪಂದವನ್ನು ರದ್ದುಗೊಳಿಸುತ್ತೇವೆ ಎಂದೂ ಬೆದರಿಕೆ ಹಾಕಿದ್ದರು.
ಟ್ರಂಪ್ ಗೆ ತಿರುಗೇಟು ನೀಡಿರುವ ಪೆಡ್ರೊ ಸ್ಯಾಂಚೆಜ್, ಯುದ್ಧ ಕುರಿತು ಸ್ಪೇನ್ ಸರ್ಕಾರದ ನಿರ್ಧಾರ ಯುದ್ಧ ಬೇಡ ಎನ್ನುವುದೇ ಆಗಿರುತ್ತದೆ. ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದ್ದಾರೆ.
ಜಗತ್ತಿಗೆ ಹಾನಿಯಾಗುವ ಯಾವುದೇ ರೀತಿಯ ಉಪಕ್ರಮದಲ್ಲೂ ನಾವು ಭಾಗಿಯಾಗುವುದಿಲ್ಲ. ಪ್ರತೀಕಾರದ ಭಯದಲ್ಲಿ ನಾವು ನಮ್ಮ ನಂಬಿಕೆ ಮತ್ತು ಮೌಲ್ಯಗಳನ್ನು ಬಲಿಕೊಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯುದ್ಧ ಮಾಡುವ ಅಮೆರಿಕದ ನಿರ್ಧಾರವನ್ನು ನಾವು ವಿರೋಧಿಸುತ್ತೇವೆ. ಇದು ಜಗತ್ತಿಗೆ ಕ್ಷೇಮವಲ್ಲ. ಈ ಸಂಬಂಧ ನಾವು ಹಲವು ಸರ್ಕಾರಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಯುರೋಪ್, ಉತ್ತರ ಅಮೆರಿಕ ಹಾಗು ಪಶ್ಚಿಮ ಏಷ್ಯಾದ ಕೋಟ್ಯಂತರ ನಾಗರಿಕರು ಯುದ್ಧವನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
2003ರಲ್ಲಿ ಇರಾಕ್ ಮೇಲೆ ದಾಳಿ ನಡೆಸಿದ ವೇಳೆಯಲ್ಲಿ ಸ್ಪೇನ್‌ನಲ್ಲಿರುವ ರೋಟಾ ನೌಕಾ ನೆಲೆ ಮತ್ತು ಮೊರೊನ್ ವಾಯುನೆಲೆಯನ್ನು ಅಮೆರಿಕ ಸೇನೆ ಬಳಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.