ಕ್ಷೇತ್ರ ಪುನರ್ ವಿಂಗಡಣೆ ನಿಯಮಗಳಿಗೆ ಪ್ರಮುಖ ಬದಲಾವಣೆಗಳೊಂದಿಗೆ ಲೋಕಸಭಾ ಸದಸ್ಯರ ಸಂಖ್ಯೆಯನ್ನು 543ರಿಂದ 850ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಗ್ಗಟ್ಟಿನ ವಿರೋಧ ವ್ಯಕ್ತವಾಗಿದೆ. ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದಂತಹ ರಾಜ್ಯಗಳ ರಾಜಕೀಯ ನಾಯಕರು ಮತ್ತು ಪಕ್ಷಗಳು ಈ ಸೀಮಾ ನಿರ್ಣಯವನ್ನು ವಿರೋಧಿಸಿವೆ. ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಕೇಂದ್ರ ಸರ್ಕಾರದ ಪ್ರಕ್ರಿಯೆಯ ವಿರುದ್ಧ ರಾಜಕೀಯ ಪ್ರತಿಭಟನೆಗೆ ಕರೆ ನೀಡಿದ್ದಾರೆ. ರೇವಂತ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಈ ಕ್ರಮವು ನಮ್ಮ ಪ್ರಜಾಪ್ರಭುತ್ವ ಮತ್ತು ದೇಶದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. “ನಿಜವಾದ ವಿವಾದಾತ್ಮಕ ವಿಷಯವೆಂದರೆ ಸೀಟುಗಳನ್ನು ಅನುಪಾತದ ಆಧಾರದ ಮೇಲೆ 850ಕ್ಕೆ ಹೆಚ್ಚಿಸುವುದು. ಇದು ರಾಜಕೀಯ ಶಕ್ತಿಯನ್ನು ಬದಲಾಯಿಸಬಹುದು ಮತ್ತು ದಕ್ಷಿಣ ರಾಜ್ಯಗಳಲ್ಲಿ ಅಸಮತೋಲನವನ್ನು ಉಂಟುಮಾಡಬಹುದು” ಎಂದು ಹೇಳಿದ್ದಾರೆ. ಕ್ಷೇತ್ರ ವಿಂಗಡಣೆಗೆ ಸಂಬಂಧಿಸಿದಂತೆ ತಮಿಳುನಾಡು ಎದುರಿಸಬಹುದಾದ ಪರಿಣಾಮಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ಡಿಎಂಕೆ ಸಂಸದರ ತುರ್ತು ಸಭೆ ಕರೆದಿದ್ದಾರೆ. ಈ ಸಭೆಯ ನಂತರ ಅವರು, “ನಮ್ಮ ತಲೆಯ ಮೇಲೆ ನೇತಾಡುತ್ತಿದ್ದ ಕತ್ತಿ ಈಗ ನಮ್ಮ ಕುತ್ತಿಗೆಯ ಮೇಲೆ ಬಿದ್ದಿದೆ. ನಮ್ಮ ಡಿಎಂಕೆ ಸಂಸದರೊಂದಿಗೆ ಸಮಾಲೋಚಿಸಿ, ನಾವು ರಾಜ್ಯಗಳಾದ್ಯಂತದ ಸಂಸತ್ ಸದಸ್ಯರನ್ನು ಸಂಪರ್ಕಿಸುತ್ತಿದ್ದೇವೆ. ಈ ನಿರ್ಧಾರದಿಂದ ಆಗುವ ಗಂಭೀರ ಅಪಾಯವನ್ನು ಎದುರಿಸಲು ಸಂಘಟಿತ ಕಾರ್ಯತಂತ್ರವನ್ನು ರೂಪಿಸುತ್ತಿದ್ದೇವೆ. ಇದು ಪಕ್ಷಗಳು ಅಥವಾ ವ್ಯಕ್ತಿಗಳ ಬಗ್ಗೆ ಅಲ್ಲ. ಇದು ನಮ್ಮ ಜನರ ಹಕ್ಕುಗಳನ್ನು ರಕ್ಷಿಸುವ ಬಗೆಗಿನ ಹೋರಾಟವಾಗಿದೆ. ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ಭಾರತದಾದ್ಯಂತ ಎಲ್ಲಾ ಪಕ್ಷಗಳು ಮತ್ತು ಸಂಸದರು ಒಂದಾಗಬೇಕೆಂದು ನಾನು ಮನವಿ ಮಾಡುತ್ತೇನೆ” ಎಂದು ಸ್ಟಾಲಿನ್ ಹೇಳಿದ್ದಾರೆ.