ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಹಣ ವಸೂಲಿ ಮಾಡುವ ಉದ್ದೇಶಕ್ಕಾಗಿಯೇ ಸಿದ್ದರಾಮಯ್ಯ ತಮ್ಮ ಮಗನನ್ನು ನೇಮಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಿಎಂ ಮಗನ ವಸೂಲಿ ದಂಧೆಯ ಬಗ್ಗೆ ರಾಜ್ಯದ ಎಲ್ಲಾ ಅಧಿಕಾರಿಗಳಿಗೂ ತಿಳಿದಿದೆ ಎಂದು ಕಿಡಿಕಾರಿದ ಅವರು, ಮಗ ನಿಖಿಲ್ ಕುಮಾರಸ್ವಾಮಿ ಜನರ ಅಪೇಕ್ಷೆಯಂತೆ ರಾಜಕೀಯಕ್ಕೆ ಬಂದಿದ್ದಾನೆಯೇ ಹೊರತು ವಸೂಲಿಗಲ್ಲ ಎಂದು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಅವರಿಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಎಚ್‌ಡಿಕೆ ಟೀಕಿಸಿದ್ದಾರೆ.
ಸಿದ್ದರಾಮಯ್ಯ ಅವರ ರಾಜಕೀಯ ಇತಿಹಾಸವನ್ನು ಸ್ಮರಿಸಿದ ಕುಮಾರಸ್ವಾಮಿ, 1999ರ ಚುನಾವಣೆಯಲ್ಲಿ ಸೋತಾಗ ಸಿದ್ದರಾಮಯ್ಯ ಅವರು ದೇವೇಗೌಡರ ಮನೆಗೆ ಬಂದು ಕಣ್ಣೀರು ಹಾಕಿದ್ದರು ಎಂದು ವ್ಯಂಗ್ಯವಾಡಿದ್ದಾರೆ. "ಅಂದು ಅವರ ಕಣ್ಣೀರಿಗೆ ಬಕೆಟ್ ಇಟ್ಟಿದ್ದರೆ ಅದು ತುಂಬಿ ಹೋಗುತ್ತಿತ್ತು" ಎಂದು ಹೇಳುವ ಮೂಲಕ ಅಂದು ದೇವೇಗೌಡರು ನೀಡಿದ ರಾಜಕೀಯ ಆಶ್ರಯವನ್ನು ಸಿದ್ದರಾಮಯ್ಯ ಮರೆತಿದ್ದಾರೆ ಎಂದು ಕುಟುಕಿದರು. ಅಲ್ಲದೆ, 2006ರಲ್ಲಿ ಅಹಿಂದ ಹೆಸರಿನಲ್ಲಿ ಪಕ್ಷಕ್ಕೆ ದ್ರೋಹ ಬಗೆದ ಸಿದ್ದರಾಮಯ್ಯ, ಇಂದು ಕಾಂಗ್ರೆಸ್ ಬಿಟ್ಟು ಹೊರಬಂದು ಕನಿಷ್ಠ ಹತ್ತು ಕ್ಷೇತ್ರಗಳಲ್ಲಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಪಕ್ಷದ ಅವನತಿಗೆ ಸಿದ್ದರಾಮಯ್ಯ ಅವರೇ ಕಾರಣವಾಗಲಿದ್ದಾರೆ ಎಂದು ಭವಿಷ್ಯ ನುಡಿದ ಎಚ್‌ಡಿಕೆ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲೇ ಆಂತರಿಕ ಕಲಹ ನಡೆಯುತ್ತಿದೆ ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು. ಸ್ವಾರ್ಥಕ್ಕಾಗಿ ದೇವರ ಮೊರೆ ಹೋದರೆ ಫಲ ಸಿಗುವುದಿಲ್ಲ ಎಂದು ಶಿವಕುಮಾರ್ ಅವರ ನಡೆಯನ್ನು ವಿಶ್ಲೇಷಿಸಿದ ಅವರು, ರಾಜ್ಯ ಸರ್ಕಾರ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ರಾಜ್ಯಕ್ಕೆ ಹೆಚ್ಚಿನ ಕಾರ್ಖಾನೆಗಳನ್ನು ತರುವುದಾಗಿ ಭರವಸೆ ನೀಡಿದರು. ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಸಿಎಂ ಸ್ಥಾನ ಬಿಟ್ಟುಕೊಡುವುದಿಲ್ಲ ಎಂಬುದು ಅವರ ಸ್ವಭಾವದಿಂದಲೇ ತಿಳಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.