ಭಾರೀ ದುರಂತದ ಘಟನೆ ರಷ್ಯಾದಲ್ಲಿ ನಡೆದಿದೆ. ಮಿಲಿಟರಿ ಸಾರಿಗೆ ವಿಮಾನ ಪತನಗೊಂಡು 29 ಮಂದಿ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ರಷ್ಯಾಗೆ ಸೇರಿದ An-26 ಮಿಲಿಟರಿ ಸಾರಿಗೆ ವಿಮಾನವು ಕ್ರೈಮಿಯಾ ಪ್ರದೇಶದಲ್ಲಿ ಬಂಡೆಗೆ ಅಪ್ಪಳಿಸಿ ಪತನಗೊಂಡಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ 29 ಮಂದಿ ಮೃತಪಟ್ಟಿದ್ದಾರೆ.ರಕ್ಷಣಾ ಸಚಿವಾಲಯದ ಪ್ರಕಾರ, 23 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಸೇರಿ ಒಟ್ಟು 29 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಿಂದ ಯಾರೂ ಬದುಕುಳಿದಿಲ್ಲ ಎಂದು ದೃಢಪಡಿಸಲಾಗಿದೆ.
ಸಂಪರ್ಕ ಕಳೆದುಕೊಂಡಿದ್ದ ವಿಮಾನ ನಂತರ ಪತನಗೊಂಡಿರುವುದು ತಿಳಿದುಬಂದಿದೆ. ಪ್ರಾಥಮಿಕ ವರದಿಗಳ ಪ್ರಕಾರ, ತಾಂತ್ರಿಕ ದೋಷವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಕ್ಷಿಪಣಿ ದಾಳಿ, ಡ್ರೋನ್ ದಾಳಿ ಅಥವಾ ಪಕ್ಷಿ ದಾಳಿ ಸಾಧ್ಯತೆಗಳನ್ನು ಅಧಿಕಾರಿಗಳು ತಳ್ಳಿ ಹಾಕಿದ್ದಾರೆ. ಶೋಧ ಮತ್ತು ರಕ್ಷಣಾ ತಂಡಗಳು ಅಪಘಾತ ಸ್ಥಳವನ್ನು ಪತ್ತೆಹಚ್ಚಿದ್ದು, ತನಿಖೆಗೆ ಮಿಲಿಟರಿ ಆಯೋಗವನ್ನು ನಿಯೋಜಿಸಲಾಗಿದೆ. ಈ ಘಟನೆ ರಷ್ಯಾದ ಮಿಲಿಟರಿ ಸಾರಿಗೆ ವ್ಯವಸ್ಥೆಯ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.
1960ರ ದಶಕದಲ್ಲಿ ಪರಿಚಯಿಸಲಾದ An-26 ವಿಮಾನವನ್ನು ಮಿಲಿಟರಿ ಹಾಗೂ ನಾಗರಿಕ ಬಳಕೆಗಾಗಿ ವ್ಯಾಪಕವಾಗಿ ಬಳಸಲಾಗುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಹಲವು ಅಪಘಾತಗಳಲ್ಲಿ ಸಿಲುಕಿದೆ.ಇನ್ನೊಂದೆಡೆ, ಕ್ರೈಮಿಯಾ ಪ್ರದೇಶದ ರಾಜಕೀಯ ಉದ್ವಿಗ್ನತೆಯ ನಡುವೆ ಈ ದುರಂತ ಸಂಭವಿಸಿದ್ದು, ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ.