ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರ 22 ವರ್ಷದ ಮಗಳು ಬುಧವಾರ ಬೆಳಗ್ಗೆ ಆಗ್ನೇಯ ದೆಹಲಿಯ ವಸಾಹತು ಪ್ರದೇಶದಲ್ಲಿರುವ ಅವರ ಮನೆಯಲ್ಲಿ ಕೊಲೆಯಾಗಿದ್ದಾರೆ. ಕೊಲೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಹತ್ಯೆಗೆ ಮೊಬೈಲ್ ಫೋನ್ ಚಾರ್ಜರ್ ಕೇಬಲ್ ಬಳಕೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಎಂಜಿನಿಯರಿಂಗ್ ಮುಗಿಸಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಹಿರಿಯ ಅಧಿಕಾರಿಯ ಪುತ್ರಿಯ ಮೇಲೆ ಅತ್ಯಾಚಾರ ನಡೆಸಿ ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಕೃತ್ಯಕ್ಕೆ ಮೊಬೈಲ್ ಫೋನ್ ಚಾರ್ಜಿಂಗ್ ಕೇಬಲ್ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಮಯದಲ್ಲಿ ಮನೆಯಲ್ಲಿ ಯುವತಿ ಒಬ್ಬಳೇ ಇದ್ದಳು. ಆಕೆಯ ಪೋಷಕರು ಜಿಮ್‌ಗೆ ಹೋಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಒಂದೂವರೆ ತಿಂಗಳ ಹಿಂದೆ ಕೆಲಸದಿಂದ ತೆಗೆಯಲಾಗಿದ್ದ ಮನೆಗೆಲಸದ ವ್ಯಕ್ತಿಯ ಮೇಲೆ ಶಂಕೆ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.