ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿ ಹೊಸ ಇತಿಹಾಸ ಬರೆದಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ದಾಂಡಿಗರು ಸಿಡಿಲಬ್ಬರದ ಪ್ರದರ್ಶನ ನೀಡುವ ಮೂಲಕ 20 ಓವರ್‌ಗಳಲ್ಲಿ ಬರೋಬ್ಬರಿ 250 ರನ್ ಕಲೆಹಾಕಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಸಿಎಸ್‌ಕೆ ವಿರುದ್ಧ 250 ರನ್‌ಗಳ ಗಡಿ ದಾಟಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಯಿತು.
ಕಳೆದ 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಚೆನ್ನೈ ತಂಡದ ವಿರುದ್ಧ ಯಾವುದೇ ತಂಡಕ್ಕೆ 235 ರನ್‌ಗಳಿಗಿಂತ ಹೆಚ್ಚಿನ ಸ್ಕೋರ್ ದಾಖಲಿಸಲು ಸಾಧ್ಯವಾಗಿರಲಿಲ್ಲ. ಈ ಹಿಂದೆ 2014ರಲ್ಲಿ ಕೆಕೆಆರ್ ಮತ್ತು 2024ರಲ್ಲಿ ಗುಜರಾತ್ ಟೈಟಾನ್ಸ್ ತಂಡಗಳು ಗಳಿಸಿದ್ದ 231 ರನ್‌ಗಳೇ ಶ್ರೇಷ್ಠ ಮೊತ್ತವಾಗಿತ್ತು. ಆದರೆ, ಈ ಪಂದ್ಯದಲ್ಲಿ ಆರ್‌ಸಿಬಿ ಆಟಗಾರರು ಸಿಎಸ್‌ಕೆ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ, ಹಳೆಯ ಎಲ್ಲಾ ದಾಖಲೆಗಳನ್ನು ನುಚ್ಚುನೂರು ಮಾಡಿದರು. ಈ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನವು ಚೆನ್ನೈ ತಂಡದ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತು.
ಕೇವಲ ಗರಿಷ್ಠ ಮೊತ್ತ ಮಾತ್ರವಲ್ಲದೆ, ಆರ್‌ಸಿಬಿ ಈ ಪಂದ್ಯದ ಮೂಲಕ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ. ಐಪಿಎಲ್‌ನಲ್ಲಿ ಇದುವರೆಗೆ 36 ಬಾರಿ 200ಕ್ಕೂ ಅಧಿಕ ರನ್ ಗಳಿಸುವ ಮೂಲಕ ಆರ್‌ಸಿಬಿ, ಸಿಎಸ್‌ಕೆ ತಂಡ ಹೊಂದಿದ್ದ ದಾಖಲೆಯನ್ನು ಸರಿಗಟ್ಟಿದೆ. 18 ವರ್ಷಗಳ ಇತಿಹಾಸದಲ್ಲಿ ಸಿಎಸ್‌ಕೆ ವಿರುದ್ಧ ಇಂತಹದೊಂದು ಬೃಹತ್ ಮೊತ್ತ ದಾಖಲಿಸಿದ ಆರ್‌ಸಿಬಿ ಹುಡುಗರ ಈ ಸಾಧನೆ ಸದ್ಯ ಕ್ರಿಕೆಟ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.