2026-03-07 06:02:31

Ramesh Babu attacks | ಖರ್ಗೆ ಕುಟುಂಬವನ್ನು ಪ್ರಶ್ನಿಸುವ ನೈತಿಕತೆ ವಿಜಯೇಂದ್ರಗೆ ಇಲ್ಲ ರಮೇಶ್ ಬಾಬು ವಾಗ್ದಾಳಿ | Speed News Kannada

Ramesh Babu attacks | ಖರ್ಗೆ ಕುಟುಂಬವನ್ನು ಪ್ರಶ್ನಿಸುವ ನೈತಿಕತೆ ವಿಜಯೇಂದ್ರಗೆ ಇಲ್ಲ ರಮೇಶ್ ಬಾಬು ವಾಗ್ದಾಳಿ | Speed News Kannada

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ ಅವರ ಕುಟುಂಬ, ಅವರ ಸಿದ್ಧಾಂತ, ಅಥವಾ ಅವರು ಈ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳನ್ನು ಪ್ರಶ್ನಿಸುವ ನೈತಿಕತೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ. 
ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ವಿಜಯೇಂದ್ರ ಮತ್ತು ಅವರ ಪಟಾಲಂಗೆ ನೈತಿಕತೆ ಎನ್ನುವುದೇ ಇಲ್ಲ. ಇವರಿಂದ ನೈತಿಕತೆಯ ಪಾಠ, ಆದರ್ಶದ ಪಾಠ, ಸಿದ್ಧಾಂತದ ಪಾಠ ಹೇಳಿಸಿಕೊಳ್ಳುವ ಅನಿವಾರ್ಯತೆ ಅಥವಾ ಅವಶ್ಯಕತೆ ಖರ್ಗೆರವರ ಕುಟುಂಬಕ್ಕಾಗಲಿ, ಕಾಂಗ್ರೆಸ್ ಪಕ್ಷಕ್ಕೆ ಆಗಲಿ ಅಥವಾ ಕರ್ನಾಟಕದ ಜನರಿಗಾಗಲಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಬಾಲ ಭವನದ ನಾಯಕ ವಿಜಯೇಂದ್ರರವರು ತನ್ನ ಪಟಾಲಾಂ ಜೊತೆ ಖರ್ಗೆ ಮತ್ತು ಅವರ ಕುಟುಂಬದ ಮೇಲೆ ಅವಲತ್ತುಕೊಂಡಿರುವುದು ಅವರ ಬೌದ್ಧಿಕ ದಿವಾಳಿತನದ ಸಾಕ್ಷಿಯಾಗಿರುತ್ತದೆ. ಕರ್ನಾಟಕದ ಬಿಜೆಪಿಗೆ ಮತ್ತು ಸಂಘ ಪರಿವಾರದವರಿಗೆ ತಮ್ಮ ಸಮರ್ಥನೆಗೆ ಇಂತಹ ಬಾಲಂಗೋಚಿ ನಾಯಕರ ಅವಶ್ಯಕತೆ ಬಂದಿರುವುದು ವ್ಯವಸ್ಥೆಯ ದೌರ್ಬಲ್ಯವಾಗಿರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. 
ತಮ್ಮ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ವಿಜಯೇಂದ್ರರವರಿಗೆ, ಆರ್.ಎಸ್.ಎಸ್ ಸಮರ್ಥಿಸುವ ಅನಿವಾರ್ಯತೆ ಸೃಷ್ಟಿ ಆಗಿರುವುದು ದೊಡ್ಡ ವಿಪರ್ಯಾಸ. ಮೊದಲು ಆರ್‌.ಎಸ್‌.ಎಸ್  ನವರು ಇವರ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಸಮರ್ಥಿಸಲಿ!  ನಂತರ ಅವರು ಆರೆಸ್ಸೆಸ್ ಪರವಾದ ಹೇಳಿಕೆಯನ್ನು ನೀಡಲಿ ಎಂದಿದ್ದಾರೆ
ಬಿಜೆಪಿ ಅಧಿಕರಾದ ಅವಧಿಯಲ್ಲಿ ಅತ್ಯಂತ ಭ್ರಷ್ಟಾಚಾರದ ಆರೋಪವನ್ನು ಸ್ವಪಕ್ಷದಿಂದಲೇ ಎದುರಿಸಿ ಪಲಾಯನ ಗೈದಂತಹ ನಾಯಕ ವಿಜಯೇಂದ್ರ. ತಮ್ಮ ತಂದೆ ಬಿ.ಎಸ್.ಯಡಿಯೂರಪ್ಪನವರ ಸಹಿಯನ್ನು ನಕಲು ಮಾಡಿದ ಆರೋಪವನ್ನು ಹೊತ್ತಿರುವ ಅವರು ಇಂದಿಗೂ ಸಾರ್ವಜನಿಕವಾಗಿ  ಉತ್ತರ ನೀಡಿಲ್ಲ. 
ನೀರಾವರಿ ಇಲಾಖೆಯಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳ ಅವ್ಯವಹಾರ ನಡೆಸಿದ್ದಾರೆ ಎಂದು ಅವರದೇ ಪಕ್ಷದ ಶಾಸಕರು ಆರೋಪಗಳನ್ನು ಮಾಡಿದಾಗ ಮನೆ ಸೇರಿದ ವ್ಯಕ್ತಿ ವಿಜಯೇಂದ್ರ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಜಯೇಂದ್ರರವರ ಈ ವ್ಯರ್ಥ ಪ್ರಲಾಪವನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಮತ್ತು ಸಂಘ ಪರಿವಾರ ಇಂತಹ ನಾಟಕಗಳಿಂದ ಸತ್ಯವನ್ನು ಮುಚ್ಚಲು ಸಾಧ್ಯವೇ ಇಲ್ಲ ಎಂಬುದನ್ನು ಕಾಂಗ್ರೆಸ್ ಪಕ್ಷ ಹೇಳಲು ಬಯಸುತ್ತದೆ ಎಂದು ರಮೇಶ್‌ ಬಾಬು ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.