ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವು ಮಾರ್ಚ್ 17ರಂದು ಇರುವುದರಿಂದ, ಇಂದು (ಮಾರ್ಚ್ 13) ಅವರ ನಟನೆಯ 'ಆಕಾಶ್' ಚಿತ್ರವನ್ನು ಮರುಬಿಡುಗಡೆ ಮಾಡಲಾಗಿದೆ. 'ಆಕಾಶ್' ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಮೋಹಕ ತಾರೆ ರಮ್ಯಾ ಅವರು ಜೋಡಿಯಾಗಿದ್ದರು. ಈ ಚಿತ್ರವು 2005ರಲ್ಲಿ ಮೊದಲ ತೆರೆ ಕಂಡಿತ್ತು. ಮಹೇಶ್ ಬಾಬು ನಿರ್ದೇಶನದ ಈ ಚಿತ್ರವನ್ನು 21 ವರ್ಷಗಳ ಬಳಿಕ ಪಿಆರ್‌ಕೆ ಸಂಸ್ಥೆ ಮರುಬಿಡುಗಡೆ ಮಾಡುತ್ತಿದೆ.
ಈ ಕುರಿತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸಾಮಾಜಿಕ ಮಾಧ್ಯಮ ಇನ್ಸಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 'ಆಕಾಶ್' ಚಿತ್ರದ ಪೋಸ್ಟರ್ ಶೇರ್ ಮಾಡಿಕೊಂಡು ಈ ಚಿತ್ರವು ಯಾವ ಚಿತ್ರಮಂದಿರದಲ್ಲಿ ಲಭ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.
ಸುಮಾರು 21 ವರ್ಷಗಳ ಹಿಂದೆ ತೆರೆಕಂಡಿದ್ದ ಈ ಚಿತ್ರವು 200ಕ್ಕೂ ಅಧಿಕ ದಿನ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ಈ ಸಿನಿಮಾವನ್ನು ಪಾರ್ವತಮ್ಮ ರಾಜ್‌ಕುಮಾರ್ ಅವರು ನಿರ್ಮಾಣ ಮಾಡಿದ್ದರು. ಅವಿನಾಶ್, ಆಶಿಶ್ ವಿದ್ಯಾರ್ಥಿ, ಪವಿತ್ರಾ ಲೋಕೇಶ್, ಕಿಶೋರ್, ಆಶಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.