ಪೀಣ್ಯ ಎಲಿವೇಟೆಡ್ ಫ್ಲೈಓವರ್ ಅನ್ನು ಏಪ್ರಿಲ್ 13ರಿಂದ 5 ದಿನಗಳ ಕಾಲ ಬಂದ್ ಮಾಡುವ ನಿರ್ಧಾರವನ್ನು ಹಿಂಪಡೆಯಲಾಗಿದೆ. ನಾಳೆಯಿಂದ ಫ್ಲೈಓವರ್ ಮೇಲೆ ವಾಹನ ಸಂಚಾರ ಎಂದಿನಂತೆ ಮುಂದುವರೆಯಲಿದೆ ಎಂದು ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ವೇತುವೆಯ ಕೇಬಲ್‌ಗಳ ದುರಸ್ತಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಂತಿಮ ಲೋಡ್ ಟೆಸ್ಟಿಂಗ್ ನಡೆಸಲು ಯೋಜಿಸಿತ್ತು. ಈ ಕಾರಣಕ್ಕೆ ಏಪ್ರಿಲ್ 13ರ ಬೆಳಿಗ್ಗೆ 5 ಗಂಟೆಯಿಂದ ಏಪ್ರಿಲ್ 17ರ ಬೆಳಿಗ್ಗೆ 11 ಗಂಟೆಯವರೆಗೆ ವಾಹನ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತದೆ ಎಂದು ಮೊದಲು ಘೋಷಿಸಲಾಗಿತ್ತು.
ಆದರೆ ಕಾರಣಾಂತರಗಳಿಂದ ಲೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಹೀಗಾಗಿ ಫ್ಲೈಓವರ್ ಬಂದ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.ಇದೇ ವೇಳೆ, ಏಪ್ರಿಲ್ 15ರಂದು ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಭೇಟಿ ಮಾಡುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಸ್ತೆ ಮಾರ್ಗದಲ್ಲಿ ಅವರ ಪ್ರಯಾಣ ಸಾಧ್ಯತೆ ಇರುವುದರಿಂದ ಟ್ರಾಫಿಕ್ ದಟ್ಟಣೆ ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ.ಹೀಗಾಗಿ ಪೀಣ್ಯ, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ ಮತ್ತು 8ನೇ ಮೈಲಿ ಭಾಗಗಳಲ್ಲಿ ಸಂಚಾರ ಎಂದಿನಂತೆ ಮುಂದುವರೆಯಲಿದೆ