ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಚನ್ನಪಟ್ಟಣ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂದು ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು, ಮುಖಂಡರಿಂದ ಒತ್ತಾಯ ಮಾಡುತ್ತಿದ್ದು ಈ ಬಗ್ಗೆ ಕಾಲವೇ ತೀರ್ಮಾನ ಮಾಡಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಚನ್ನಪಟ್ಟಣವನ್ನು ಹೆಚ್‌ಡಿಕೆ ಅಭಿವೃದ್ಧಿ ಮಾಡಿಲ್ಲ ಎಂಬ ಎಸ್‌ಟಿ ಸೋಮಶೇಖರ್ ಅವರ ಟೀಕೆಗೆ ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 'ನಾನ್ಯಾಕೆ ಸೋಮಶೇಖರ್ ಗೆ ಉತ್ತರ ಕೊಡಲಿ? ಅವರಿಗೆ ಮುಂದಿನ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದ ಜನರೇ ಉತ್ತರ ನೀಡುತ್ತಾರೆ. ಅಭಿವೃದ್ಧಿಯ ಆಧಾರದ ಮೇಲೆ ಅವರು ಗೆಲ್ಲುತ್ತಿಲ್ಲ, ಬದಲಾಗಿ ಒಂದು ವರ್ಗದ ಮುಗ್ಧ ಜನರಿಗೆ ರಾತ್ರೋರಾತ್ರಿ ಕೂಪನ್ ಮತ್ತು ಫುಡ್ ಕಿಟ್ ಕೊಟ್ಟು ವೋಟ್ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇದೇ ವೇಳೆ ಕುಮಾರಸ್ವಾಮಿ ಅವರ ಅವಧಿಯಲ್ಲಿ ಚನ್ನಪಟ್ಟಣದಲ್ಲಿ 1,200 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕೆಲಸಗಳಾಗಿವೆ ಎಂದು ಸಮರ್ಥಿಸಿಕೊಂಡ ನಿಖಿಲ್, 'ಸೋಮಶೇಖರ್ ಅವರಿಗೆ ಮಾಹಿತಿ ಕೊರತೆ ಇದ್ದರೆ, ಚನ್ನಪಟ್ಟಣದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ನಾನೇ ಅವರ ಮನೆಗೆ ‘ಕೊರಿಯರ್’ ಮಾಡುತ್ತೇನೆ' ಎಂದು ವ್ಯಂಗ್ಯವಾಡಿದರು.