ಬೆಂಗಳೂರು: ಉದ್ಯೋಗ ನೇಮಕಾತಿ ಕುರಿತು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆ, ಹಗರಣಗಳು, ಪರೀಕ್ಷೆಗಳ ರದ್ದತಿ ಮತ್ತು ದಿನೇ ದಿನೇ ಹೆಚ್ಚುತ್ತಿರುವ ಖಾಲಿ ಹುದ್ದೆಗಳು ನಮ್ಮ ಯುವಜನತೆಯ ಆತ್ಮವಿಶ್ವಾಸವನ್ನು ಬುಡಮೇಲು ಮಾಡಿವೆ. ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್‌ನಿಂದ ಹಿಡಿದು ಪೊಲೀಸ್, ಪಿಎಸ್‌ಐ, ಎಫ್‌ಡಿಎ/ಎಸ್‌ಡಿಎ ಪರೀಕ್ಷೆಗಳವರೆಗಿನ ವಿಫಲತೆಗಳು ಕೇವಲ ವ್ಯಕ್ತಿಗತ ಲೋಪಗಳಲ್ಲ; ಇದು ಇಡೀ ವ್ಯವಸ್ಥೆಯ ಸೋಲು. ಇಲ್ಲಿ ಪ್ರತಿಯೊಬ್ಬ ಭಾಗಿದಾರರೂ ಜವಾಬ್ದಾರಿಯನ್ನು ಹೊರಬೇಕಿದೆ.
ಮಂಜೂರಾದ ಹುದ್ದೆಗಳಲ್ಲಿ ಇಂದು ಸುಮಾರು ಮೂರನೇ ಒಂದು ಭಾಗದಷ್ಟು ಸ್ಥಾನಗಳು ಖಾಲಿ ಇವೆ. ಹತ್ತು ವರ್ಷಗಳ ಹಿಂದೆ ಶೇ. 24ರಷ್ಟಿದ್ದ ಖಾಲಿ ಹುದ್ದೆಗಳ ಪ್ರಮಾಣ ಇಂದು ಶೇ. 33ಕ್ಕೆ ಏರಿಕೆಯಾಗಿದೆ ಎಂದರೆ, ಇದು ಕೇವಲ ಅಲ್ಪಾವಧಿಯ ಸಮಸ್ಯೆಯಲ್ಲ, ದಶಕಗಳಿಂದ ಬೆಳೆದು ಬಂದಿರುವ ಆಳವಾದ ರಚನಾತ್ಮಕ ಬಿಕ್ಕಟ್ಟು ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಒಬ್ಬರನ್ನೊಬ್ಬರು ದೂಷಿಸುವುದನ್ನು ನಿಲ್ಲಿಸಿ, ಈಗ ಸುಧಾರಣೆಯತ್ತ ಹೆಜ್ಜೆ ಇಡಬೇಕಾದ ಸಮಯ ಬಂದಿದೆ.
ಈ ಕೆಳಗಿನ ರಚನಾತ್ಮಕ ಬದಲಾವಣೆಗಳನ್ನು ತರುವ ಮೂಲಕ ದೇಶಕ್ಕೆ ಮಾದರಿಯಾಗಬೇಕು ಎಂದಿದ್ದಾರೆ.
ಪ್ರತಿ ವರ್ಷ ಜನವರಿಯಲ್ಲಿ ಅಧಿಸೂಚನೆ, ಪರೀಕ್ಷೆ, ಫಲಿತಾಂಶ ಮತ್ತು ನೇಮಕಾತಿಯ ನಿಖರ ದಿನಾಂಕಗಳನ್ನು ಒಳಗೊಂಡ ಕ್ಯಾಲೆಂಡರ್ ಬಿಡುಗಡೆ ಮಾಡಬೇಕು. ಖಾಲಿ ಇರುವ ಹುದ್ದೆಗಳನ್ನು ಒಂದು ನಿರ್ದಿಷ್ಟ ಕಾಲಮಿತಿಯಲ್ಲಿ ಭರ್ತಿ ಮಾಡಲು ಪಾರದರ್ಶಕ 'ಮಿಷನ್ ಮೋಡ್' ಯೋಜನೆ ರೂಪಿಸಬೇಕು.
ಮಾನವ ಹಸ್ತಕ್ಷೇಪ ಮತ್ತು ವಿಳಂಬವನ್ನು ತಪ್ಪಿಸಲು ಸಾಧ್ಯವಿರುವ ಕಡೆಗಳಲ್ಲಿ ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸಬೇಕು. ಪಾರದರ್ಶಕತೆ ಕಾಪಾಡಲು ಮತ್ತು ನಕಲಿ ಅಭ್ಯರ್ಥಿಗಳನ್ನು ತಡೆಯಲು ನೇಮಕಾತಿಯ ಪ್ರತಿ ಹಂತದಲ್ಲೂ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ಬರಬೇಕು. ಎನ್‌ಕ್ರಿಪ್ಟ್ ಮಾಡಿದ ಡಿಜಿಟಲ್ ಪ್ರಶ್ನೆ ಪತ್ರಿಕೆಗಳ ಬಳಕೆ ಮತ್ತು ಸಿಸಿಟಿವಿ ಕಣ್ಗಾವಲಿರುವ ಮೊಬೈಲ್ ರಹಿತ ಪರೀಕ್ಷಾ ಕೇಂದ್ರಗಳನ್ನು ಕಡ್ಡಾಯಗೊಳಿಸಬೇಕು.
ಪ್ರತಿಯೊಂದು ಇಲಾಖೆಯ ನೇಮಕಾತಿ ಪ್ರಕ್ರಿಯೆಯ ಪ್ರಗತಿಯನ್ನು ಜನಸಾಮಾನ್ಯರು ಗಮನಿಸುವಂತೆ ಡಿಜಿಟಲ್ ಡ್ಯಾಶ್‌ಬೋರ್ಡ್ ಸಿದ್ಧಪಡಿಸಬೇಕು. ಮಹಾರಾಷ್ಟ್ರದ ಮಾದರಿಯಲ್ಲಿ ಪರೀಕ್ಷಾ ಅಕ್ರಮ ಮತ್ತು ಪೇಪರ್ ಸೋರಿಕೆ ವಿರುದ್ಧ ಕಠಿಣವಾದ, ಜಾಮೀನು ರಹಿತ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು ಎಂದು ವಿವರಿಸಿದ್ದಾರೆ.
ಇಂದು ತೆಲಂಗಾಣ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಕಠಿಣ ಕಾನೂನುಗಳನ್ನು ಜಾರಿಗೆ ತಂದಿವೆ. ಇದೇ ಮಾದರಿಯಲ್ಲಿ ಕರ್ನಾಟಕವು ಪಾರದರ್ಶಕ ನೇಮಕಾತಿಯಲ್ಲಿ ರಾಷ್ಟ್ರೀಯ ಮಾನದಂಡವನ್ನು ಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.ಬೆಂಗಳೂರು: ಉದ್ಯೋಗ ನೇಮಕಾತಿ ಕುರಿತು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆ, ಹಗರಣಗಳು, ಪರೀಕ್ಷೆಗಳ ರದ್ದತಿ ಮತ್ತು ದಿನೇ ದಿನೇ ಹೆಚ್ಚುತ್ತಿರುವ ಖಾಲಿ ಹುದ್ದೆಗಳು ನಮ್ಮ ಯುವಜನತೆಯ ಆತ್ಮವಿಶ್ವಾಸವನ್ನು ಬುಡಮೇಲು ಮಾಡಿವೆ. ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್‌ನಿಂದ ಹಿಡಿದು ಪೊಲೀಸ್, ಪಿಎಸ್‌ಐ, ಎಫ್‌ಡಿಎ/ಎಸ್‌ಡಿಎ ಪರೀಕ್ಷೆಗಳವರೆಗಿನ ವಿಫಲತೆಗಳು ಕೇವಲ ವ್ಯಕ್ತಿಗತ ಲೋಪಗಳಲ್ಲ; ಇದು ಇಡೀ ವ್ಯವಸ್ಥೆಯ ಸೋಲು. ಇಲ್ಲಿ ಪ್ರತಿಯೊಬ್ಬ ಭಾಗಿದಾರರೂ ಜವಾಬ್ದಾರಿಯನ್ನು ಹೊರಬೇಕಿದೆ.
ಮಂಜೂರಾದ ಹುದ್ದೆಗಳಲ್ಲಿ ಇಂದು ಸುಮಾರು ಮೂರನೇ ಒಂದು ಭಾಗದಷ್ಟು ಸ್ಥಾನಗಳು ಖಾಲಿ ಇವೆ. ಹತ್ತು ವರ್ಷಗಳ ಹಿಂದೆ ಶೇ. 24ರಷ್ಟಿದ್ದ ಖಾಲಿ ಹುದ್ದೆಗಳ ಪ್ರಮಾಣ ಇಂದು ಶೇ. 33ಕ್ಕೆ ಏರಿಕೆಯಾಗಿದೆ ಎಂದರೆ, ಇದು ಕೇವಲ ಅಲ್ಪಾವಧಿಯ ಸಮಸ್ಯೆಯಲ್ಲ, ದಶಕಗಳಿಂದ ಬೆಳೆದು ಬಂದಿರುವ ಆಳವಾದ ರಚನಾತ್ಮಕ ಬಿಕ್ಕಟ್ಟು ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಒಬ್ಬರನ್ನೊಬ್ಬರು ದೂಷಿಸುವುದನ್ನು ನಿಲ್ಲಿಸಿ, ಈಗ ಸುಧಾರಣೆಯತ್ತ ಹೆಜ್ಜೆ ಇಡಬೇಕಾದ ಸಮಯ ಬಂದಿದೆ.
ಈ ಕೆಳಗಿನ ರಚನಾತ್ಮಕ ಬದಲಾವಣೆಗಳನ್ನು ತರುವ ಮೂಲಕ ದೇಶಕ್ಕೆ ಮಾದರಿಯಾಗಬೇಕು ಎಂದಿದ್ದಾರೆ.
ಪ್ರತಿ ವರ್ಷ ಜನವರಿಯಲ್ಲಿ ಅಧಿಸೂಚನೆ, ಪರೀಕ್ಷೆ, ಫಲಿತಾಂಶ ಮತ್ತು ನೇಮಕಾತಿಯ ನಿಖರ ದಿನಾಂಕಗಳನ್ನು ಒಳಗೊಂಡ ಕ್ಯಾಲೆಂಡರ್ ಬಿಡುಗಡೆ ಮಾಡಬೇಕು. ಖಾಲಿ ಇರುವ ಹುದ್ದೆಗಳನ್ನು ಒಂದು ನಿರ್ದಿಷ್ಟ ಕಾಲಮಿತಿಯಲ್ಲಿ ಭರ್ತಿ ಮಾಡಲು ಪಾರದರ್ಶಕ 'ಮಿಷನ್ ಮೋಡ್' ಯೋಜನೆ ರೂಪಿಸಬೇಕು.
ಮಾನವ ಹಸ್ತಕ್ಷೇಪ ಮತ್ತು ವಿಳಂಬವನ್ನು ತಪ್ಪಿಸಲು ಸಾಧ್ಯವಿರುವ ಕಡೆಗಳಲ್ಲಿ ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸಬೇಕು. ಪಾರದರ್ಶಕತೆ ಕಾಪಾಡಲು ಮತ್ತು ನಕಲಿ ಅಭ್ಯರ್ಥಿಗಳನ್ನು ತಡೆಯಲು ನೇಮಕಾತಿಯ ಪ್ರತಿ ಹಂತದಲ್ಲೂ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ಬರಬೇಕು. ಎನ್‌ಕ್ರಿಪ್ಟ್ ಮಾಡಿದ ಡಿಜಿಟಲ್ ಪ್ರಶ್ನೆ ಪತ್ರಿಕೆಗಳ ಬಳಕೆ ಮತ್ತು ಸಿಸಿಟಿವಿ ಕಣ್ಗಾವಲಿರುವ ಮೊಬೈಲ್ ರಹಿತ ಪರೀಕ್ಷಾ ಕೇಂದ್ರಗಳನ್ನು ಕಡ್ಡಾಯಗೊಳಿಸಬೇಕು.
ಪ್ರತಿಯೊಂದು ಇಲಾಖೆಯ ನೇಮಕಾತಿ ಪ್ರಕ್ರಿಯೆಯ ಪ್ರಗತಿಯನ್ನು ಜನಸಾಮಾನ್ಯರು ಗಮನಿಸುವಂತೆ ಡಿಜಿಟಲ್ ಡ್ಯಾಶ್‌ಬೋರ್ಡ್ ಸಿದ್ಧಪಡಿಸಬೇಕು. ಮಹಾರಾಷ್ಟ್ರದ ಮಾದರಿಯಲ್ಲಿ ಪರೀಕ್ಷಾ ಅಕ್ರಮ ಮತ್ತು ಪೇಪರ್ ಸೋರಿಕೆ ವಿರುದ್ಧ ಕಠಿಣವಾದ, ಜಾಮೀನು ರಹಿತ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು ಎಂದು ವಿವರಿಸಿದ್ದಾರೆ.
ಇಂದು ತೆಲಂಗಾಣ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಕಠಿಣ ಕಾನೂನುಗಳನ್ನು ಜಾರಿಗೆ ತಂದಿವೆ. ಇದೇ ಮಾದರಿಯಲ್ಲಿ ಕರ್ನಾಟಕವು ಪಾರದರ್ಶಕ ನೇಮಕಾತಿಯಲ್ಲಿ ರಾಷ್ಟ್ರೀಯ ಮಾನದಂಡವನ್ನು ಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.