ಡೇಟಿಂಗ್ ಆ್ಯಪ್‌ಗಳಲ್ಲಿ ಸುಂದರ ಪ್ರೊಫೈಲ್, ಆಕರ್ಷಕ ಮಾತುಗಳು, ಪ್ರತಿಷ್ಠಿತ ಉದ್ಯೋಗದ ಹಣೆಪಟ್ಟಿ, ಮೂಲಕ ಆನಂದ್ ಕುಮಾರ್ ಬರೋಬ್ಬರಿ 500ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿ 2 ಕೋಟಿ ರೂಪಾಯಿ ಸುಲಿಗೆ ಮಾಡಿದ್ದಾನೆ. ತನ್ನ ನಕಲಿ ಪ್ರೊಫೈಲ್, ಆಕರ್ಷಕ ಮಾತುಗಳಿಂದ ಹೆಣ್ಣು ಮಕ್ಕಳನ್ನು ಬಲೆಗೆ ಬೀಳಿಸಿಕೊಂಡಿದ್ದ. ಇದೀಗ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ನಿವಾಸಿಯಾದ 35 ವರ್ಷದ ಆನಂದ್ ಕುಮಾರ್, ದೆಹಲಿ ಸೈಬರ್ ಕ್ರೈಂ ಪೊಲೀಸ್ ತಂಡದ ಕೈಲಿ ಸಿಕ್ಕಿಬಿದ್ದಿದ್ದಾನೆ. ಆನಂದ್ ಕುಮಾರ್ ಡೇಟಿಂಗ್ ಆ್ಯಪ್‌ಗಳಲ್ಲಿ ಈತ ಒಮ್ಮೆ ಡಾಕ್ಟರ್, ಇನ್ನೊಮ್ಮೆ ಲಾಯರ್, ಮತ್ತೊಮ್ಮೆ ಸಿನಿಮಾ ಪ್ರೊಡ್ಯೂಸರ್, ವೈಭವ್ ಅರೋರಾ, ರೋಹಿತ್ ಬೆಹ್ಲ್, ತರುಣ್ ಶರ್ಮಾ ಎಂಬ ನಕಲಿ ಹೆಸರುಗಳ ಅಡಿಯಲ್ಲಿ ಇನ್‌ಸ್ಟಾಗ್ರಾಮ್ ಮತ್ತು ವೈವಾಹಿಕ ತಾಣಗಳಲ್ಲಿ ನೂರಾರು ನಕಲಿ ಪ್ರೊಫೈಲ್‌ಗಳನ್ನು ಈತ ನಿರ್ವಹಿಸುತ್ತಿದ್ದ. ಡೇಟಿಂಗ್ ಆ್ಯಪ್‌ಗಳಲ್ಲಿ ಒಬ್ಬ ಯುವತಿಯ ವಿಶ್ವಾಸ ಗಳಿಸಿದ ಮೇಲೆ ಮದುವೆಯಾಗುವ ಭರವಸೆ ನೀಡುತ್ತಿದ್ದ. ನಂತರ ಅವರಿಂದ ಎನೇನೋ ನಾಟಕವಾಡಿ ಹಣವನ್ನು ಪಡೆದು ವಂಚಿಸುತ್ತಿದ್ದ. ವೈಭವ್ ಅರೋರಾ ಹೆಸರಿನಲ್ಲಿ ಪ್ರೀತಿ ಬೆಳೆಸಿದ. ಆನಂದ್ ಎಂಬ ಸ್ನೇಹಿತನನ್ನು ಪರಿಚಯಿಸಿ ವಿಶ್ವಾಸ ಮೂಡಿಸಿದ. ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಹಣ ಪಡೆದ. ಸಂತ್ರಸ್ತೆ ಹಣ ವಾಪಸ್ ಕೇಳಿದಾಗ, ‘ವೈಭವ್ ಮೃತಪಟ್ಟಿದ್ದಾನೆ’ ಎಂಬ ಸುಳ್ಳು ಮಾಹಿತಿಯನ್ನು ವಾಟ್ಸಾಪ್ ಮೂಲಕ ರವಾನಿಸಿ ಕಣ್ಮರೆಯಾಗಲು ಯತ್ನಿಸಿದ್ದ. ಮದುವೆ ಹೆಸರಲ್ಲಿ ವಂಚಿಸುತ್ತಿದ್ದ ಅನಂದ್ ಕುಮಾರ್‌ನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಈತ ಭಾರತದಾದ್ಯಂತ ಸುಮಾರು 500ಕ್ಕೂ ಹೆಚ್ಚು ಮಹಿಳೆಯರನ್ನು ಹನಿಟ್ರಾಪ್ ಮಾಡಿದ್ದಾನೆ. ಒಟ್ಟು 2 ಕೋಟಿ ರೂ. ಹಣವನ್ನು ಹೀಗೆ ಸುಲಿಗೆ ಮಾಡಲಾಗಿದೆ. ಕೇವಲ ಹಣವಷ್ಟೇ ಅಲ್ಲ, ಮಹಿಳೆಯರ ಖಾಸಗಿ ಫೋಟೋಗಳನ್ನು ಸಂಗ್ರಹಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಡೇಟಿಂಗ್ ಮತ್ತು ವೈವಾಹಿಕ ಆ್ಯಪ್‌ಗಳನ್ನು ಬಳಸುವವರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಅಪರಿಚಿತರ ಮಾತನ್ನು ನಂಬಿ ವೈಯಕ್ತಿಕ ಫೋಟೋ ಹಂಚಿಕೊಳ್ಳುವುದು ಅಥವಾ ಹಣದ ವರ್ಗಾವಣೆ ಮಾಡುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಸಾಕ್ಷಿ.