ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದ ಬಳಿ ಪತ್ತೆಯಾಗಿದ್ದ ಅರೆಬೆಂದ ಮಹಿಳೆಯ ಶವದ ರಹಸ್ಯ ಕೊನೆಗೂ ಬಯಲಾಗಿದೆ. ಕೇವಲ ಕಾಲುಗಳು ಮಾತ್ರ ಉಳಿಯುವಂತೆ ದೇಹವನ್ನು ಸುಟ್ಟು ಹಾಕಿದ್ದ ಹಂತಕನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಹಣದ ವ್ಯಾಮೋಹಕ್ಕೆ ಬಿದ್ದ ಪರಿಚಯಸ್ಥ ವ್ಯಕ್ತಿಯೇ ಈ ಭೀಕರ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ. ಕೊಲೆಯಾದ ಮಹಿಳೆಯನ್ನು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಗ್ರಾಮದ ಶಾಲಾ ಶಿಕ್ಷಕಿ ಜ್ಯೋತಿ ಕಪಾಳೆ ಹಿರೇಮಠ (57) ಎಂದು ಗುರುತಿಸಲಾಗಿದೆ. ಬೀದರ್‌ನಲ್ಲಿ ವಾಸವಾಗಿದ್ದ ಜ್ಯೋತಿ ಅವರು ಕಲಬುರಗಿಗೆ ಬಂದು ವಾಪಸ್ ಹೋಗುವಾಗ ಈ ದುರಂತ ಸಂಭವಿಸಿದೆ.
ತನಿಖೆಯ ವೇಳೆ ತಿಳಿದುಬಂದ ಆಘಾತಕಾರಿ ವಿಷಯವೇನೆಂದರೆ, ಆರೋಪಿ ಆನಂದ್ ಶಿಕ್ಷಕಿ ಜ್ಯೋತಿಯವರಿಂದ ಬರೋಬ್ಬರಿ 14 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಜ್ಯೋತಿ ಅವರು ಆ ಹಣವನ್ನು ವಾಪಸ್ ಕೇಳಲು ಶುರು ಮಾಡಿದ್ದರಿಂದ, ಅವರನ್ನು ಇಲ್ಲವಾಗಿಸಲು ಆನಂದ್ ಸಂಚು ರೂಪಿಸಿದ್ದ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ನಂತರ, ಗುರುತು ಸಿಗದಂತೆ ಮೃತದೇಹವನ್ನು ಕಲ್ಮೂಡ ಗ್ರಾಮದ ಬಳಿ ಸುಟ್ಟು ಹಾಕಿದ್ದ.ಅಪರಿಚಿತ ಶವ ಪತ್ತೆಯಾದ ಕೂಡಲೇ ಕಮಲಾಪುರ ಪೊಲೀಸರು, ಎಸ್ಪಿ ಮತ್ತು ಬೆರಳಚ್ಚು ತಜ್ಞರ ತಂಡದೊಂದಿಗೆ ಕಾರ್ಯಾಚರಣೆ ತೀವ್ರಗೊಳಿಸಿದ್ದರು. ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸಿದಾಗ ಹಂತಕ ಆನಂದ್ ಬಲೆಗೆ ಬಿದ್ದಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ನಂಬಿದವರಿಂದಲೇ ಹಣಕ್ಕಾಗಿ ಪ್ರಾಣ ಕಳೆದುಕೊಂಡ ಶಿಕ್ಷಕಿಯ ದುರಂತ ಅಂತ್ಯ ಕಲಬುರಗಿ ಮತ್ತು ಬೀದರ್ ಭಾಗದಲ್ಲಿ ಆತಂಕ ಮೂಡಿಸಿದೆ.