ಬೆಂಗಳೂರು: ಬಾಡಿಗೆ ಮನೆಯೊಂದರಲ್ಲಿ ವ್ಯಕ್ತಿಯ ಕೊಳೆತ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹನಟಿ ಸೇರಿದಂತೆ ಮೂವರನ್ನು ನಗರದ ಬಾಗಲಗುಂಟೆ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸಹನಟಿ ಬಿಂದೂ (31), ಈಕೆಯ ಸ್ನೇಹಿತ ವಿನಯ್ ಮತ್ತು ಧನುಷ್ ಬಂಧಿತ ಆರೋಪಿಗಳು. ಕೊಲೆಯಾದವರು ಬ್ಯಾಡರಹಳ್ಳಿ ನಿವಾಸಿ ಮೋಹನ್ ರಾವ್ (40).
ಮೋಹನ್ ರಾವ್ ಗೆ ಈಗಾಗಲೇ ಮದುವೆಯಾಗಿದ್ದು, ಪತ್ನಿಯಿಂದ ದೂರವಾಗಿ ಒಬ್ಬರೇ ವಾಸವಾಗಿದ್ದರು. ಇವರಿಗೆ ಬಿಂದೂ ಪರಿಚಯವಾಗಿದೆ. ಈಕೆಯೂ ಪತಿಯಿಂದ ದೂರವಾಗಿ ನೆಲೆಸಿದ್ದರು. ಇಬ್ಬರಿಗೂ ಪರಿಚಯವಾಗಿ ಪರಿಚಯ ಪ್ರೀತಿಗೆ ತಿರುಗಿತ್ತು. ನಂತರ ಇವರು ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥನಗರದ ವಿಜಯಲಕ್ಷ್ಮೀ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ನಂತರ ಬಿಂದೂಗೆ ಚಾಲಕ ವೃತ್ತಿಯಲ್ಲಿದ್ದ ವಿನಯ್ ಎಂಬಾತನ ಪರಿಚಯವಾಗಿದೆ. ಇವರಿಬ್ಬರೂ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಈ ವಿಷಯ ತಿಳಿದ ಮೋಹನ್ ರಾವ್ ಗಲಾಟೆ ಆರಂಭಿಸಿದ್ದಾರೆ. ಹೀಗಾಗಿ ಇವರನ್ನು ಮುಗಿಸಲು ಬಿಂದೂ, ವಿನಯ್ ಸಂಚು ರೂಪಿಸಿದ್ದಾರೆ.
ಒಂದು ದಿನ ಮೋಹನ್‌ರಾವ್‌ಗೆ ವಿಪರೀತ ಮದ್ಯ ಕುಡಿಸಿ ಇವರನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ. ಈ ಕೆಲಸಕ್ಕೆ ವಿನಯ್ ತನ್ನ ಸ್ನೇಹಿತ ಧನುಷ್ ಸಹಾಯ ಪಡೆದಿದ್ದಾನೆ.
ಅನುಮಾನ ಬರಬಾರದು ಎಂದು ಮೂವರೂ ಆರೋಪಿಗಳು ಧರ್ಮಸ್ಥಳ ಪ್ರವಾಸಕ್ಕೆ ತೆರಳಿದ್ದಾರೆ.
ಇತ್ತ ಈ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ನೆರೆಹೊರೆಯವರು ಗಮನಿಸಿ ಮನೆ ಮಾಲೀಕ ನಟರಾಜು ಅವರಿಗೆ ವಿಷಯ ತಿಳಿಸಿದ್ದಾರೆ. ಅವರು ಬಂದು ಬೀಗ ತೆಗೆದು ನೋಡಿದಾಗ ವ್ಯಕ್ತಿಯೊಬ್ಬರ ಕೈಕಾಲು ಕಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಕಂಡು ಬಂದಿದೆ. ಶವ ಕೊಳೆತ್ತಿತ್ತು. ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ತನಿಖೆ ಚುರುಕುಗೊಳಿಸಿದ ಪೊಲೀಸರು ಮೋಹನ್ ಜತೆ ವಾಸವಾಗಿದ್ದದ್ದು ಸಹನಟಿ ಬಿಂದೂ ಎಂದು ತಿಳಿದು ಬಂದಿದೆ. ಆಕೆಯ ಮೊಬೈಲ್ ನಂಬರ್ ಆಧರಿಸಿ ಪೊಲೀಸರು ಲಾಕ್ ಮಾಡಿದ್ದಾರೆ. ಮೂವರೂ ಈಗ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿದ್ದಾರೆ.