ಭುವನೇಶ್ವರ: ಪ್ರಿಯಕರನನ್ನು ನಂಬಿ ಮನೆ ಬಿಟ್ಟು ಬಂದ ಯುವತಿ ಮೇಲೆ ಅತ್ಯಾಚರ ಎಸಗಿ ಕೊಲೆ ಮಾಡಿರುವ ಘಟನೆ ಒಡಿಶಾದ ಜಗತಿಸಂಗ್‌ಪುರ ಜಿಲ್ಲೆಯಲ್ಲಿ ವರದಿಯಾಗಿದೆ. '23 ವರ್ಷದ ಯುವತಿಯು ಆರೋಪಿಯನ್ನು ಪ್ರೀತಿಸುತ್ತಿದ್ದಳು. ಆತ, ದೇವಾಲಯದಲ್ಲಿ ಮದುವೆಯಾಗುವುದಾಗಿ ನಂಬಿಸಿ, ಮನೆ ಬಿಟ್ಟು ಬರುವಂತೆ ಹೇಳಿದ್ದ. ಅದರಂತೆ ಯುವತಿಯು ಫೆಬ್ರುವರಿ 22ರಂದು ಮನೆ ಬಿಟ್ಟು ಬಂದಿದ್ದಳು. ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋದ ಆರೋಪಿ, ಅತ್ಯಾಚಾರವೆಸಗಿ, ರಹಾಮ ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದ' ಎಂದು ಜಗತಿಸಂಗ್ಪುರ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಕುಮಾರ್ ವರ್ಮಾ ಹೇಳಿದ್ದಾರೆ.
ಈ ಬಳಿಕ ಸಂತ್ರಸ್ತೆಯು ಬಸ್ ನಿಲ್ದಾಣದಲ್ಲೇ ಕಾಯುತ್ತಿದ್ದಾಗ ಬೈಕ್‌ನಲ್ಲಿ ಬಂದ ಮತ್ತೊಬ್ಬ ಆರೋಪಿ, ಆಕೆಯ ಅಸಹಾಯಕ ಸ್ಥಿತಿಯನ್ನು ಕಂಡು ಸಹಾಯ ಮಾಡುವುದಾಗಿ ನಂಬಿಸಿದ್ದಾನೆ. ನಂತರ, ಪರದೀಪ್ ಪಟ್ಟಣದಲ್ಲಿ ತಾನು ವಾಸವಿರುವ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿ, ಛಾವಣಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ, ಆಕೆಯನ್ನು ಕಟ್ಟದ ಮೇಲಿಂದ ಎಸೆದು ಕೊಲೆ ಮಾಡಿದ್ದಾನೆ. ಈತ ಜಾರ್ಖಂಡ್ ಮೂಲದವನು' ಎಂದು ಮಾಹಿತಿ ನೀಡಿದ್ದಾರೆ.'
ಮರುದಿನ ಬೆಳಿಗ್ಗೆ ಶವ ಪತ್ತೆಯಾಗಿದೆ.. ಪೊಲೀಸರು, ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆದರೆ, ಮೃತ ಯುವತಿಯ ಸಹೋದರ, ಅತ್ಯಾಚಾರ ಹಾಗೂ ಕೊಲೆ ಆರೋಪದಡಿ ಪರದೀಪ್ ಪೊಲೀಸ್ ಠಾಣೆಗೆ ಫೆಬ್ರುವರಿ 25ರಂದು ದೂರು ನೀಡಿದ್ದರು.
ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅಪಹರಣ, ಅತ್ಯಾಚಾರ ಹಾಗೂ ಕೊಲೆ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.