ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರ ಪತ್ನಿ ಟೀನಾ ಅಂಬಾನಿ ಅವರ ವಿರುದ್ಧ ಹೊಸದಾಗಿ ಸಮನ್ಸ್ ನೀಡಲಾಗುವುದು ಎಂದು ಜಾರಿ ನಿರ್ದೇಶನಾಲಯ (ಇಡಿ) ತಿಳಿಸಿದೆ.
ಸೋಮವಾರವೇ ದೆಹಲಿಯ ಇಡಿ ಕಚೇರಿಗೆ ಹಾಜರಾಗಲು ಟೀನಾ ಅವರಿಗೆ ಸೂಚನೆ ನೀಡಲಾಗಿತ್ತು. ಆದರೆ, ಅವರು ಹಾಜರಾಗಿಲ್ಲ. ಹಾಗಾಗಿ, ಶೀಘ್ರದಲ್ಲೇ ಅವರಿಗೆ ಮತ್ತೊಮ್ಮೆ ಸಮನ್ಸ್ ನೀಡುವುದಾಗಿ ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಯಾರ್ಕ್ ನಗರದಲ್ಲಿರುವ ಮ್ಯಾನ್‌ಹ್ಯಾಟನ್‌ನಲ್ಲಿ ಐಷಾರಾಮಿ ಕಾಂಡೋಮಿನಿಯಂ ಖರೀದಿಗೆ ಸಂಬಂಧಿಸಿದಂತೆ ಹಣದ ಮೂಲದ ಕುರಿತು ವಿಚಾರಣೆ ನಡೆಸಲು ಟಿನಾ ಅವರಿಗೆ ಸೂಚನೆ ನೀಡಲಾಗಿತ್ತು.
ಇತ್ತೀಚೆಗೆ ಇಡಿ ಇದೇ ಪ್ರಕರಣದಲ್ಲಿ ಮಾಜಿ ಆರ್ ಕಾಮ್ (ರಿಲಯನ್ಸ್ ಕಮ್ಯುನಿಕೇಷನ್) ಅಧ್ಯಕ್ಷ ಪುನೀತ್ ಗರ್ಗ್ ಅವರನ್ನು ವಿಚಾರಣೆ ನಡೆಸಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ ವಿರುದ್ಧದ ಬ್ಯಾಂಕ್ ವಂಚನೆ ಮತ್ತು ಸಂಬಂಧಿತ ಆರ್ಥಿಕ ಅಕ್ರಮಗಳಿಗೆ ಸಂಬಂಧಿಸಿ ಹಲವು ಪ್ರಕರಣಗಳ ತನಿಖೆಗಾಗಿ ಎಸ್‌ಐಟಿ ರಚನೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.