ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ 2024ರಲ್ಲಿ ಬಿಡುಗಡಡೆಯಾಗಿತ್ತು, ಹಾಗೂ ಸಾಕಷ್ಟು ಜನಪ್ರಿಯತೆ ಕಂಡಿತ್ತು. ಸುದೀಪ್ ಅಭಿನಯದ ಸಿನಿಮಾಕ್ಕೆ ತಮಿಳಿನ ನಿರ್ಮಾಪಕ ಕಲೈಪುಲಿ ಎಸ್ ತನು ಮತ್ತು ಕಿಚ್ಚ ಸುದೀಪ್ ಇಬ್ಬರೂ ಬಂಡವಾಳ ಹೂಡಿದ್ದರು. ಸಿನಿಮಾವನ್ನು ವಿತರಣೆ ಮಾಡಿದ್ದು ಕೆಆರ್ಜಿ ಸ್ಟುಡಿಯೋಸ್. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ನಿರ್ಮಾಪಕರು ಮತ್ತು ಕೆಆರ್ಜಿ ನಡುವೆ ಹಣಕಾಸಿಗೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿದ್ದು, ನಿರ್ಮಾಪಕ ಕಲೈಪುಲಿ ತನು ಅವರು ಕೆಆರ್ಜಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್ಜಿ ಮನವಿ ಮೇರೆಗೆ ಸಿನಿಮಾದ ನಿರ್ಮಾಪಕರಿಗೆ ಮದ್ರಾಸ್ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.
ಕೆಆರ್‌ಜಿ ಸ್ಟುಡಿಯೋಸ್ ಚಿತ್ರದ ಆದಾಯ ಮತ್ತು ವೆಚ್ಚದ ಸರಿಯಾದ ಲೆಕ್ಕಪತ್ರಗಳನ್ನು ನೀಡಿಲ್ಲ ಮತ್ತು ತಮಗೆ ಬರಬೇಕಾದ ಬಾಕಿ ಹಣವನ್ನು ಪಾವತಿಸಿಲ್ಲ ಎಂದು ಆರೋಪಿಸಿ ತನು ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಸಿವಿಲ್ ಮೊಕದ್ದಮೆ ಹೂಡಿದ್ದರು. ಅಲ್ಲದೆ, 18% ಬಡ್ಡಿಯೊಂದಿಗೆ ಬಾಕಿ ಹಣ ಮತ್ತು 1 ಕೋಟಿ ರೂ. ನಷ್ಟಪರಿಹಾರಕ್ಕೂ ಬೇಡಿಕೆ ಇಟ್ಟಿದ್ದರು. ಚಿತ್ರವು ಪ್ರಮುಖವಾಗಿ ಕನ್ನಡ ಭಾಷೆಯದ್ದಾಗಿದೆ. ಒಪ್ಪಂದದ ಪ್ರಕಾರ ಯಾವುದೇ ವಿವಾದವಿದ್ದರೂ ಅದು ಬೆಂಗಳೂರಿನ ನ್ಯಾಯಾಲಯಗಳ ವ್ಯಾಪ್ತಿಗೆ ಬರಬೇಕು ಎಂದು ಕೆಆರ್ಜಿ ಒತ್ತಾಯಿಸಿದೆ. ವಿಚಾರಣೆಯ ಸಂದರ್ಭದಲ್ಲಿ ಒಂದು ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಒಪ್ಪಂದ ಪತ್ರದಲ್ಲಿ ಬೆಂಗಳೂರು ಎಂಬ ಪದವನ್ನು ಹೊಡೆದುಹಾಕಿ ಚೆನ್ನೈ ಎಂದು ಬರೆಯಾಗಿದೆ. ಈ ಬದಲಾವಣೆ ಮಾಡಿರುವ ಬಗ್ಗೆ ಕೆಆರ್‌ಜಿ ಸ್ಟುಡಿಯೋಸ್ ವಾದಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕಲೈಪುಲಿ ಅವರಿಗೆ ನೊಟೀಸ್ ನೀಡಲಾಗಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ನಿಗದಿಪಡಿಸಲಾಗಿದೆ.