ಬಳ್ಳಾರಿ : ಗಣಿ ನಾಡು ಬಳ್ಳಾರಿಯಲ್ಲಿ ಬೆಚ್ಚಿಬೀಳುವಂಥಾ ಘಟನೆಯೊಂದು (Crime) ನಡೆದಿದೆ. ಹಣಕಾಸಿನ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿ, ಮಂಗಳಮುಖಿ ಮತ್ತು ಆಕೆಯ ಪ್ರಿಯತಮ ಸಾವನ್ನಪ್ಪಿದ್ದಾರೆ.
ಮೃತರನ್ನು ತೃತೀಯ ಲಿಂಗಿ ಸುಹಾಸಿನಿ (29) ಮತ್ತು ಆಕೆಯ ಪ್ರಿಯತಮ ರಾಜಶೇಖರ ಎಂದು ಗುರುತಿಸಲಾಗಿದೆ.ಬಳ್ಳಾರಿಯ ಮೇದಾರ ಕೇತಯ್ಯ ನಗರದ ಬಾಡಿಗೆ ಮನೆಯೊಂದರಲ್ಲಿ ಇಬ್ಬರು ಸಾವಿಗೆ ಶರಣಾಗಿದ್ದಾರೆ.
ಡೈರಿ ಕ್ರಾಸ್ ಬಳಿಯ ಬಾಡಿಗೆ ಮನೆಯಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ಮಂಗಳಮುಖಿ ಮತ್ತು ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮನೆಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಬಳ್ಳಾರಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ಸಂಬಂಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಆರಂಭದಲ್ಲಿ ಇಬ್ಬರೂ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ, ತನಿಖೆ ಮುಂದುವರಿದಂತೆ ಮಂಗಳಮುಖಿ ಸುಹಾಸಿನಿಯನ್ನು ಕೊಲೆ ಮಾಡಿ ನಂತರ ಶೇಖರ್ ಸಾವಿಗೆ ಶರಣಾಗಿರುಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಯಾರು ಈ ಸುಹಾಸಿನಿ..?
ಮೂಲತಃ ಬಳ್ಳಾರಿ ತಾಲೂಕಿನ ಚಾಗನೂರು ಗ್ರಾಮಕ್ಕೆ ಸೇರಿದ ಸುಹಾಸಿನಿ, ತೃತೀಯಲಿಂಗಿಯಾದ ಬಳಿಕ ಕಳೆದ 6 ವರ್ಷದಿಂದ ಮನೆ ತೊರೆದಿದ್ದಳು. ಇದರ ನಡುವೆ ಹೊಸಪೇಟೆ ತಾಲೂಕಿನ ಮಲಪನಗುಡಿ ಗ್ರಾಮದ ರಾಜಶೇಖರನ ಜತೆ ಸ್ನೇಹ ಬೆಳಸಿದ್ದಳು. ಇದೇ ಸ್ನೇಹ ಇಬ್ಬರ ನಡುವೆ ಪ್ರೀತಿ ಬೆಳೆಯುವಂತೆ ಮಾಡಿತು. ಇಬ್ಬರು ಹೊಸಪೇಟೆಯಲ್ಲಿ ಜೀವನ ನಡೆಸುತ್ತಿದ್ದರು.ಮಂಗಳಮುಖಿಯರಿಂದ ಗಂಭೀರ ಆರೋಪ
ಮಂಗಳಮುಖಿ ಸಮುದಾಯದ ಸದಸ್ಯರು ಶೇಖರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹಣಕ್ಕಾಗಿ ಸುಹಾಸಿನಿಯ ಜೊತೆ ಇದ್ದ ಶೇಖರ್, ನಂತರ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಅಟೋ ಕೊಡಿಸಿದ್ದ ಸುಹಾಸಿನಿ
ಮಂಗಳಮುಖಿ ಸುಹಾಸಿನಿ ಒಳ್ಳೆಯ ದುಡಿಮೆ ಮಾಡುತ್ತಿದ್ದಳು. ತನ್ನ ದುಡಿಮೆಯ ಹಣದಿಂದ ಶೇಖರ್‌ಗೆ ಆಟೋ ಕೊಡಿಸಿದ್ದಳಂತೆ. ಅದರಿಂದ ಇಬ್ಬರೂ ಜೀವನ ಸಾಗಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಸಣ್ಣಪುಟ್ಟ ಜಗಳಗಳು ನಡೆದಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಜೋಡಿ ಪ್ರತಿ ಮಂಗಳವಾರ ಬಳ್ಳಾರಿಯ ದುರ್ಗಮ್ಮ ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದರು. ಇತ್ತೀಚೆಗೆ ಹಂಪಿ ಉತ್ಸವದಲ್ಲಿ ಭಿಕ್ಷೆ ಬೇಡಿ ಸೋಮವಾರ ಮಧ್ಯಾಹ್ನ ಬಳ್ಳಾರಿಗೆ ಬಂದಿದ್ದರು.
ಪ್ರತಿ ವಾರದಂತೆ ಮೊನ್ನೆ ಬಳ್ಳಾರಿಗೆ ಬಂದಿದ್ದ ಇವರು ಎಂ.ಕೆ.ನಗರದ ಮನೆಗೆ ತೆರಳಿದ್ದಾರೆ.. ಅಲ್ಲಿಯೇ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ಶವ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ.