2026-03-07 03:34:32

Mahashivratri | ಮಹಾಶಿವರಾತ್ರಿ ಆಚರಣೆ ಹೇಗೆ ಮತ್ತು ಏಕೆ ಈ ದಿನಕ್ಕಿರುವ ವೈಜ್ಞಾನಿಕ ಕಾರಣಗಳೇನು | Speed News Kannada

Mahashivratri | ಮಹಾಶಿವರಾತ್ರಿ ಆಚರಣೆ ಹೇಗೆ ಮತ್ತು ಏಕೆ ಈ ದಿನಕ್ಕಿರುವ ವೈಜ್ಞಾನಿಕ ಕಾರಣಗಳೇನು | Speed News Kannada

ಬೆಂಗಳೂರು: ಪ್ರತಿ ವರ್ಷ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾ ಶಿವರಾತ್ರಿ ಹಬ್ಬವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಮಹಾಶಿವರಾತ್ರಿ ಆಚರಣೆಗೆ ಇಂತಹುದೇ ಎಂಬ ನಿರ್ದಿಷ್ಟ ಕಾರಣವಿಲ್ಲ. ಶಿವ ಹಾಗೂ ಪಾರ್ವತಿಯ ಸಂಯೋಗದ ಪ್ರತೀಕವಾಗಿ ಮಹಾಶಿವರಾತ್ರಿ ಆಚರಿಸಲಾಗುತ್ತಿದೆ ಎಂಬಲ್ಲಿಂದ  ಹಿಡಿದು ಸಮುದ್ರ ಮಥನದ ಸಂದರ್ಭದಲ್ಲಿ ಉಕ್ಕಿಬಂದ ಹಾಲಾಹಲವನ್ನು ಕುಡಿದು ಶಿವನು ಜಗತ್ತನ್ನು ಉಳಿಸಿದ ಮಹಾ ಪರ್ವದಿನ ಎಂಬಲ್ಲಿಯವರೆಗೆ ಹಲವು ಕಥನಗಳು ಮಹಾಶಿವರಾತ್ರಿಯ ಜತೆ ಥಳುಕು ಹಾಕಿಕೊಂಡಿವೆ.
ಶಿವರಾತ್ರಿಯಂದು ಸೃಷ್ಟಿ, ಸ್ಥಿತಿ ಲಯಗಳ ತಾಂಡವ ನೃತ್ಯ ಮಾಡಿದ ದಿನ ಎಂದೂ ಹೇಳಲಾಗುತ್ತದೆ. 
ಮತ್ತೊಂದು ಪೌರಾಣಿಕ ಕಥೆಯ ಪ್ರಕಾರ, ಶಿವನನ್ನು ಪಡೆಯುವುದಕ್ಕಾಗಿ ಹಂಬಲಿಸುತ್ತಾ ತಪಸ್ಸನ್ನು ಆಚರಿಸುತ್ತಿದ್ದ ಪಾರ್ವತಿಯನ್ನು ವಿವಾಹವಾದ ದಿನವೇ ಮಹಾಶಿವರಾತ್ರಿ ಎಂಬ ಉಲ್ಲೇಖವೂ ಅಲ್ಲಲ್ಲಿ ಕಂಡು ಬರುತ್ತದೆ. 
ವಿಷ ಗಂಟಲಿನಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎಂದು ಶಿವಪುರಾಣದಲ್ಲಿ ಹೇಳಲಾಗಿದೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ಕಂಗೆಟ್ಟ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟ. ಆ ದಿನವನ್ನೂ ಮಹಾಶಿವರಾತ್ರಿ ಎಂದು ಆಚರಿಸುತ್ತಾ ಬರಲಾಗಿದೆ.
ಉಪವಾಸ ಏಕೆ?
ಮಹಾಶಿವರಾತ್ರಿಯಂದು ಉಪವಾಸ ಕೈಗೊಂಡು ಜಾಗರಣೆ ಮಾಡುವುದರ ಹಿಂದೆ ಪೌರಾಣಿಕ ಮತ್ತು ವೈಜ್ಞಾನಿಕ ಕಾರಣಗಳನ್ನು ಕಾಣಬಹುದು.
ಜಾಗರಣೆಯಿಂದ ಅಜ್ಞಾನ ಕಳೆದು ಸ್ವಯಂ ಸಾಕ್ಷಾತ್ಕಾರವನ್ನು ಸಾಧಿಸಲು ಸಾಧ್ಯವಾಗುತ್ತದೆ. ಈ ರೀತಿ ಜಾಗೃತವಾಗಿರುವುದನ್ನೇ ಜಾಗರಣೆ ಎಂದು ಹೇಳಲಾಗುತ್ತದೆ. ಈ ರೀತಿ ಜಾಗರಣೆ ಆಚರಿಸಿ ಸ್ವಯಂ ಸಾಕ್ಷಾತ್ಕಾರ ಮಾಡಿಕೊಂಡ ವ್ಯಕ್ತಿ ಜನನ-ಮರಣಗಳ ಚಕ್ರದಿಂದ ಬಿಡುಗಡೆ ಹೊಂದುತ್ತಾನೆ ಎಂಬ ಪ್ರತೀತಿ ಇದೆ.  ಉಪವಾಸ ಆಚರಣೆ ಮಾಡುವುದರಿಂದ ನಕಾರಾತ್ಮಕ ಚಿಂತನೆ, ಶಕ್ತಿಗಳು ದೂರವಾಗುತ್ತವೆ. ಆ ಮೂಲಕ ಜೀವನಕ್ಕೆ ಹೊಸ ಚೈತನ್ಯ ಲಭಿಸುತ್ತದೆ ಎಂಬ ನಂಬಿಕೆಯನ್ನೂ ಕಾಣಬಹುದು. 
ಶಿವರಾತ್ರಿ ಆಚರಣೆ ಹೇಗೆ?
ಮಹಾಶಿವರಾತ್ರಿಯನ್ನು ಮನೆ ಮತ್ತು ದೇವಾಲಯಗಳಲ್ಲಿ ಸುಲಭವಾಗಿ ಆಚರಣೆ ಮಾಡಬಹುದಾಗಿದೆ. ದೇವಾಲಯಗಳಲ್ಲಿ ಶಿವರಾತ್ರಿ ಆಚರಣೆಯನ್ನು 4 ಯಾಮ ಎಂದು ವಿಂಗಡಿಸಿ  ರುದ್ರಾಭಿಷೇಕ ನೆರವೇರಿಸುವ ಮೂಲಕ ಆಚರಿಸಲಾಗುತ್ತದೆ.
ಯಾಮ ಎಂಬ ಶಬ್ದ ಕಾಲವನ್ನು ಸೂಚಿಸುತ್ತದೆ. ಒಂದು ಯಾಮ ಎಂದರೆ ಮೂರು ಗಂಟೆಗಳ ಅವಧಿ. 12 ಗಂಟೆಗಳ ರಾತ್ರಿಯ ಅವಧಿಯನ್ನು 4 ಯಾಮಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಮೊದಲ ಯಾಮ ಪೂಜೆ ಸಂಜೆ 6 ಗಂಟೆಯಿಂದ 9 ಗಂಟೆಯವರೆಗೂ ಆಚರಣೆ ಮಾಡಲಾಗುತ್ತದೆ. (ಮೊದಲ ಯಾಮ ಪೂಜೆ ಸೂರ್ಯಾಸ್ತದ ಮೇಲೆ ಅವಲಂಬನೆಯಾಗಿರುತ್ತದೆ) 2 ನೇ ಯಾಮ ಪೂಜೆ ರಾತ್ರಿ 9 ರಿಂದ 12 ವರೆಗೆ, 3 ನೇ ಯಾಮ ಪೂಜೆ ಮಧ್ಯ ರಾತ್ರಿ 12 ರಿಂದ 3 ಗಂಟೆವರೆಗೆ ಮತ್ತು4 ನೇ ಯಾಮ ಪೂಜೆ 3 ಗಂಟೆಯಿಂದ ಬೆಳಿಗ್ಗೆ 6 ಗಂಟೆ ವರೆಗೆ ನಡೆಯಲಿದೆ.
ಯಾಮ ಪೂಜೆಯ ವಿಶೇಷತೆಗಳು:
ಮೊದಲನೆಯ ಯಾಮದಲ್ಲಿ ಹೇಳಿದ ಮಂತ್ರಗಳ ಎರಡರಷ್ಟನ್ನು 2 ನೇ ಯಾಮ ಪೂಜೆ ಮಾಡುವಾಗ ಪಠಿಸಬೇಕು, ಎರಡನೆಯ ಯಾಮದ ಎರಡರಷ್ಟು ಮಂತ್ರಗಳನ್ನು ಮೂರನೆಯ ಯಾಮದಲ್ಲಿ ಮತ್ತು ಮೂರನೆಯ ಯಾಮದ ಎರಡರಷ್ಟು ಮಂತ್ರಗಳನ್ನು ನಾಲ್ಕನೆಯ ಯಾಮದಲ್ಲಿ ಹೇಳುವುದು ನಡೆದುಕೊಂಡು ಬಂದಿದೆ.
ಸತತ ಹದಿನಾಲ್ಕು ವರ್ಷಗಳ ವರೆಗೆ ಈ ರೀತಿಯ ಶಿವರಾತ್ರಿ ವ್ರತವನ್ನು ಆಚರಿಸಿದರೆ ಉತ್ತಮ ಫಲ ಸಿಗಲಿದೆ ಎಂಬ ನಂಬಿಕೆ ಇದೆ.
ಶಿವರಾತ್ರಿ ಆಚರಣೆಗೆ ವೈಜ್ಞಾನಿಕ ಕಾರಣಗಳು:
ಶಿವರಾತ್ರಿಯ ಆಚರಣೆಗೆ ವೈಜ್ಞಾನಿಕ ಕಾರಣಗಳೂ ಇಲ್ಲದಿಲ್ಲ. ಸೂರ್ಯ ಮತ್ತು ಚಂದ್ರರ ಚಲನೆಯಿಂದಾಗುವ ಕಾಲ ವ್ಯತ್ಯಾಸಕ್ಕೆ ನಮ್ಮ ದೇಹ ಹೊಂದಿಕೊಳ್ಳಬೇಕಾಗುವುದು ಅನಿವಾರ್ಯ. ಚಳಿಗಾಲವು ಮುಗಿದು ಬೇಸಿಗೆ ಪ್ರಾರಂಭಗೊಳ್ಳುತ್ತದೆ. ಅಂದರೆ ಮಹಾಶಿವರಾತ್ರಿಯಂದು ಚಳಿಗಾಲ ಉತ್ತುಂಗದಲ್ಲಿದ್ದು ಕೃಷ್ಣ ಪಕ್ಷದ ಕೊನೆಯ ದಿನವಾಗಿರುತ್ತದೆ. ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. 
ಈ ದಿನದಂದು ಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ ಮಾಡುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಬಿಲ್ವಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದೆ. ಬಿಲ್ವವನ್ನು ಲಿಂಗದ ಮೇಲೆ ಹಾಕುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುತ್ತದೆ. ಆಮೂಲಕ ಉಸಿರಾಟದ ತೊಂದರೆ ನಿವಾರಣೆ ಆಗಲಿದೆ ಎಂದು ಹೇಳಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.