ವಿಜಯಪುರ ಜಿಲ್ಲೆಯಲ್ಲಿ ವಿಚಿತ್ರ ಮತ್ತು ಅಮಾನವೀಯ ಘಟನೆಯೊಂದು ನಡೆದಿದೆ. ಮಗ ನೋಡಲು ತನ್ನಂತೆ ಇಲ್ಲ ಎಂದು ಪಾಪಿ ತಂದೆಯೊಬ್ಬ ಮಗನನ್ನೇ ಕೊಲೆ ಮಾಡಿದ್ದಾರೆ. ವಿಜಯಪುರ ಜಿಲ್ಲೆ ನಾಗಠಾಣ ಗ್ರಾಮದ ಸಿದ್ದಾರ್ಥ ಮಲ್ಲಿಕಾರ್ಜುನ ಅರಕೇರಿ ಹೆತ್ತ ತಂದೆಯಿಂದಲೇ ಹತ್ಯೆಯಾಗಿದ್ದಾನೆ. ಕಳೆದ ತಿಂಗಳು ಮಾರ್ಚ್ 16ರಂದು ಪುತ್ರನನ್ನು ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿ ಕೃಷ್ಣಾ ನದಿಗೆ ತಳ್ಳಿ ತಂದೆ ಮಲ್ಲಿಕಾರ್ಜುನ ಮಗನನ್ನ ಹತ್ಯೆ ಮಾಡಿದ್ದನು. ಬಳಿಕ ಮಗನನ್ನು ಹಾಸ್ಟೆಲ್ನಲ್ಲಿ ಇಟ್ಟಿದಿನಿ ಎಂದು ಕಥೆ ಕಟ್ಟಿದ್ದನು. ಮಲ್ಲಿಕಾರ್ಜುನ ಅರಕೇರಿಗೆ ಗ್ರಾಮದ ಕೆಲ ಜನರು ನಿನ್ನ ಮಗ ಸಿದ್ದಾರ್ಥ ನೋಡಲು ನಿನಂತೆ ಇಲ್ಲ ಎಂದು ಚೇಡಿಸಿದ್ದರು. ನಿನ್ನ ಮಗನ ಹೋಲಿಕೆ ನಿನ್ನಂತಿಲ್ಲ ಎಂದು ನಿತ್ಯ ಸತಾಯಿಸುತ್ತಿದ್ದರು, ಇದರಿಂದ ರೋಸಿಹೋಗಿದ್ದ ಮಲ್ಲಿಕಾರ್ಜುನ ಅರಕೇರಿ ಹೆತ್ತ ಮಗನನ್ನು ನದಿಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾನೆ. ಮಹಾರಾಷ್ಟ್ರದ ಕರಾಡ್ ಜಿಲ್ಲೆ ವಡೋಲಿ ಬಳಿ ಕೃಷ್ಣಾ ನದಿ ಬಳಿ ಕರೆದುಕೊಂಡು ಹೋಗಿ ಮಗುವನ್ನ ನದಿಗೆ ತಳ್ಳಿದ್ದಾನೆ.
ಕಳೆದ ಮಾರ್ಚ್ 16 ರಂದು ಮಗನನ್ನು ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿ ಹತ್ಯೆ ಮಾಡಿ ವಾಪಸ್ ಊರಿಗೆ ಬಂದಿದ್ದ ಆರೋಪಿ ಮಲ್ಲಿಕಾರ್ಜುನ ಅರಕೇರಿ, ಮನೆಯವರ ಬಳಿ ಮಗನನ್ನು ಸಿಂದಗಿ ಬಳಿ ಶಾಲೆಗೆ ಸೇರಿಸಿ ಹಾಸ್ಟೆಲ್ನಲ್ಲಿ ಇಟ್ಟಿದ್ದಾಗಿ ತಿಳಿಸಿದ್ದನು. ಇನ್ನು, ಕಳೆದ ಏಪ್ರಿಲ್ 1 ರಂದು ಮಗನ ಹುಟ್ಟುಹಬ್ಬದ ದಿನ ಕರೆದುಕೊಂಡು ಬರುವಂತೆ ತಾಯಿ ಭಾಗ್ಯಶ್ರಿ ಪಟ್ಟು ಹಿಡಿದಿದ್ದರು. ಮಗ ಎಲ್ಲಿದ್ದಾನೆ ಎಂದು ಕೇಳಿದಾಗ ಆರೋಪಿ ಮಲ್ಲಿಕಾರ್ಜುನ ಮನೆಯಿಂದ ಓಡಿ ಹೋಗಿದ್ದನು. ಇದರಿಂದ ಅನುಮಾನ ಬಂದು ಮೃತ ಮಗುವಿನ ತಾಯಿ ಭಾಗ್ಯಶ್ರೀ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಮಲ್ಲಿಕಾರ್ಜುನ ಮಗನನ್ನು ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ.