2026-04-23 10:49:11

Khiladi Megha teaser audio released | ಕಿಲಾಡಿ ಮೇಘ ಟೀಸರ್ ಆಡಿಯೋ ಬಿಡುಗಡೆ | Speed news kannada

Khiladi Megha teaser audio released | ಕಿಲಾಡಿ ಮೇಘ ಟೀಸರ್ ಆಡಿಯೋ ಬಿಡುಗಡೆ | Speed news kannada

‌ಸುಲೋಚನಾ ಪ್ರೊಡಕ್ಷನ್ಸ್ ಮೂಲಕ ಸುಲೋಚನಾ ಸುಕುಮಾರ್ ಅವರು ನಿರ್ಮಿಸಿರುವ "ಕಿಲಾಡಿ ಮೇಘ" ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಹಲವಾರು  ವರ್ಷಗಳಿಂದ ಡಬ್ಬಿಂಗ್ ಕಲಾವಿದನಾಗಿ ಕೆಲಸ ಮಾಡಿರುವ ಬಿ.ಟಿ. ಮಂಜುನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಹಣದ ಹಿಂದೆ ಹೋದಾಗ ಏನೇನೆಲ್ಲ ಆಗುತ್ತದೆ ಎಂಬುದನ್ನು ಹಾರರ್ ಹಿನ್ನೆಲೆಯಲ್ಲಿ  ಹೇಳಲಾಗಿದೆ.

ಡಿಕೆಡಿ, ಡ್ರಾಮಾ ಜೂನಿಯರ್ಸ್  ಖ್ಯಾತಿಯ ಮಹಾಲಕ್ಷ್ಮಿ ಈ ಚಿತ್ರದ ನಾಯಕಿ ಮೇಘಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಿರಿಯನಟ  ಶಂಕರ್ ಅಶ್ವಥ್ ಅವರು ಒಬ್ಬ ದೈವಾರಾಧಕನ ಪಾತ್ರ ನಿರ್ವಹಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ನೃತ್ಯ‌ಕಲಾವಿದನಾಗಿ ಅಲ್ಲದೆ ಪೊಲೀಸ್ ಇಲಾಖೆಯಲ್ಲೂ ಸೇವೆ ಸಲ್ಲಿಸಿರುವ  ಸುಕುಮಾರ್ ಅವರು ಮೊದಲ ಬಾರಿಗೆ ಕಿಲಾಡಿ ಮೇಘ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಬಿ.ಟಿ. ಮಂಜುನಾಥ್ ಅರಗ ಮಾತನಾಡುತ್ತ ೧೩ ವರ್ಷದ ಹುಡುಗಿಯ ಸುತ್ತ ನಡೆಯುವ ಕಥೆಯಿದು. ಮೊದಲು ಈ ಚಿತ್ರವನ್ನು ರಾಜೇಶ್ ರಾಜ ಅವರು ಆರಂಭಿಸಿದ್ದರು. ಕಾರಣಾಂತರಗಳಿಂದ ಅವರಿಗೆ ಚಿತ್ರವನ್ನು ಕಂಪ್ಲೀಟ್ ಮಾಡಲು ಸಾಧ್ಯವಾಗಲಿಲ್ಲ. ನಂತರ ನಾನು ಚಿತ್ರವನ್ನು ಕೈಗೆತ್ತಿಕೊಂಡು ಸಾಂಗ್, ಫೈಟ್ ಸೇರಿದಂತೆ ಉಳಿದ  ಭಾಗ ಮುಗಿಸಿ ರಿಲೀಸ್ ಹಂತಕ್ಕೆ ತಂದಿದ್ದೇನೆ ಎಂದರು.

ನಿರ್ಮಾಪಕ ಸುಕುಮಾರ್ ಮಾತನಾಡುತ್ತ  ಈ ಚಿತ್ರದಲ್ಲಿ ನಾನು ಕಲಾವಿದನಾಗಿ ನಟಿಸಲು ಹೋದವನು, ವಿಧಿ ಇಲ್ಲದೆ ನಾನೇ ನಿರ್ಮಾಪಕನಾಗಬೇಕಾಯಿತು. ನಾನು ಹಾಗೂ ಮಂಜುನಾಥ್ ಇಬ್ಬರೂ ಡಾನ್ಸರ್ ಆಗಿ ಸುಮಾರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇವೆ. ಹಣದ ಹಿಂದೆ ಹೋಗಬಾರದು ಎನ್ನುವುದೇ ಕಿಲಾಡಿ ಮೇಘ ಚಿತ್ರದ ಕಥೆ ಎಂದರು.

ನಟ ಶಂಕರ್ ಅಶ್ವಥ್ ಮಾತನಾಡಿ

ನಾನು ನಿಜವಾಗಿಯೂ ಅನುಭವಿಸಿ ಮಾಡಿದಂಥ ಪಾತ್ರವಿದು. ಯಾವುದೋ ಒಂದು ಜೀವ ತುಡಿತಕ್ಕೆ ಒಳಗಾಗಿರುತ್ತೆ. ಅದನ್ನು ರಕ್ಷಣೆ ಮಾಡಲು ನಾನು ಬರುತ್ತೇನೆ ಎಂದರು. ಕೆ.ಎಂ. ಇಂದ್ರ ಅವರ ಸಂಗೀತ ಸಂಯೋಜನೆ ಈ ಚಿತ್ರದ ಹಾಡುಗಳಿಗಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ  ಕೃಷ್ಣೇಗೌಡ, ಹಿರಿಯ ಹಾಸ್ಯನಟ ಮಿತ್ರ ಅವರುಗಳು ಮುಖ್ಯಅತಿಥಿಗಳಾಗಿ ಭಾಗವಹಿಸಿ ಕಿಲಾಡಿ ಮೇಘ  ಚಿತ್ರತಂಡಕ್ಕೆ ಶುಭ ಹಾರೈಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.