ಡ್ರಗ್ಸ್ ಮುಕ್ತ ಬೆಂಗಳೂರು ನಿರ್ಮಾಣಕ್ಕೆ ಪಣ ತೊಟ್ಟಿರುವ ಸಿಟಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರು ಚಾಪೆ ಕೆಳಗೆ ತೂರಿದರೆ, ಪೆಡ್ಲರ್‌ಗಳು ರಂಗೋಲಿ ಕೆಳಗೆ ತೂರುತ್ತಿದ್ದ ದಂಧೆಗೆ ಬೆಂಗಳೂರು ಪೊಲೀಸರು ಬ್ರೇಕ್ ಹಾಕಿದ್ದಾರೆ. ವಿವಿಧೆಡೆ ದಾಳಿ ನಡೆಸಿರುವ ಖಾಕಿ ಪಡೆ, ಬರೋಬ್ಬರಿ 14 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ಸೀಜ್ ಮಾಡಿದೆ.
ಈ ಇಡೀ ಕಾರ್ಯಾಚರಣೆಯ ಹೈಲೈಟ್ ಅಂದ್ರೆ ಹೆಬ್ಬಗೋಡಿ ಪೊಲೀಸರು ಬಂಧಿಸಿರುವ ಇಮ್ಯಾನ್ಯುಯಲ್ ಎಂಬ ನೈಜೀರಿಯಾ ಪ್ರಜೆ. 2014ರಲ್ಲಿ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಈತ, ಇಲ್ಲಿನ ಮಹಿಳೆಯನ್ನೇ ಮದುವೆಯಾಗಿ ಕಳೆದ 12 ವರ್ಷಗಳಿಂದ ದಂಧೆ ನಡೆಸುತ್ತಿದ್ದ. ನಾಲ್ಕೈದು ಮನೆಗಳನ್ನು ಬಾಡಿಗೆಗೆ ಪಡೆದು ಎಂಡಿಎಂಎ, ಎಲ್‌ಎಸ್‌ಡಿ ಸೇರಿದಂತೆ ಸಿಂಥೆಟಿಕ್ ಡ್ರಗ್ಸ್ ಪೂರೈಸುತ್ತಿದ್ದ ಈತನಿಂದ ಬರೋಬ್ಬರಿ 14 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತ ಯಲಹಂಕ ಉಪನಗರ ಪೊಲೀಸರು ಕೇರಳ ಮೂಲದ ಇಬ್ಬರು ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಆದೇಶ್ ಮತ್ತು ಮೊಹಮ್ಮದ್ ನಿಶಾದ್ ಎಂಬ ಈ ಕಿರಾತಕರು ಒಡಿಶಾದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು. ಇವರಿಂದ 10 ಲಕ್ಷ 50 ಸಾವಿರ ಮೌಲ್ಯದ 21 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.
ಮತ್ತೊಂದೆಡೆ ಪರಪ್ಪನ ಅಗ್ರಹಾರ ಪೊಲೀಸರು ವಿಭಿನ್ನ ಕಾರ್ಯಾಚರಣೆ ನಡೆಸಿದ್ದಾರೆ. ಡೆಲಿವರಿ ಬಾಯ್ ಆಗಿದ್ದ ರಾಹುಲ್ ಮತ್ತು ಆಟೋ ಡ್ರೈವರ್ ಆಗಿದ್ದ ಪ್ರೇಮ್ ಎಂಬುವವರು ತಮಿಳುನಾಡಿನಿಂದ ಗಾಂಜಾ ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಇವರಿಂದ 3 ಲಕ್ಷ ಮೌಲ್ಯದ ಏಳುವರೆ ಕೆಜಿ ಗಾಂಜಾವನ್ನು ಸೀಜ್ ಮಾಡಲಾಗಿದೆ.ಒಟ್ಟಾರೆ ಬೆಂಗಳೂರಿನ ಮೂಲೆ ಮೂಲೆಗಳಲ್ಲಿ ಹರಡಿಕೊಂಡಿದ್ದ ಡ್ರಗ್ ಜಾಲಕ್ಕೆ ಪೊಲೀಸರು ಬರೆ ಎಳೆದಿದ್ದಾರೆ. ಸದ್ಯ ಬಂಧಿತರನ್ನು ಜೈಲಿಗಟ್ಟಲಾಗಿದ್ದು, ಈ ಜಾಲದ ಹಿಂದಿರುವ ಇತರ ಕಿಂಗ್‌ಪಿನ್‌ಗಳಿಗಾಗಿ ಹುಡುಕಾಟ ಮುಂದುವರಿದಿದೆ.