ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಖುಲಾಸೆಗೊಂಡು ನ್ಯಾಯಾಲಯದಿಂದ ಹೊರಬಂದ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಧ್ಯಮಗಳ ಮುಂದೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ನಾನು ಭ್ರಷ್ಟ ಅಲ್ಲ. ನಾನು ಮತ್ತು ಮನೀಷ್ ಸಿಸೋಡೊಯಾ ಆರೋಪ ಮುಕ್ತರಾಗಿದ್ದೇವೆ. ಕೊನೆಗೆ ಸತ್ಯವೇ ಗೆಲ್ಲುತ್ತದೆ ಎಂದು ನಾವು ಹೇಳಿಕೊಂಡು ಬಂದಿದ್ದೆವು ಎಂದು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಿಜೆಪಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದ ರೀತಿಯನ್ನು ನೀವೆಲ್ಲರೂ ನೋಡಿದ್ದೀರಿ, ಇಂದು ನ್ಯಾಯಾಲಯ ನಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದೆ ಎಂದೂ ಹೇಳಿದ್ದಾರೆ.
ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಎಕ್ಸ್ ನಲ್ಲಿ ಈ ಜಗತ್ತಿನಲ್ಲಿ ಎಷ್ಟೇ ಶಕ್ತಿವಂತರಾಗಿದ್ದರೂ ಶಿವಶಕ್ತಿಯನ್ನು ಮೀರಲು ಸಾಧ್ಯವಿಲ್ಲ. ಸತ್ಯ ಗೆಲ್ಲುತ್ತದೆ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ಇಂದು ನ್ಯಾಯಾಲಯ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಿಬಿಐ ದೆಹಲಿ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.