2026-03-07 05:24:49

Kannada is a secular language | ಕನ್ನಡ ಜಾತ್ಯಾತೀತ ಭಾಷೆ ಎಲ್ಲಾ ಧರ್ಮೀಯರು ಕನ್ನಡ ಸಾಹಿತ್ಯ ಕಟ್ಟಿದ್ದಾರೆ ನಾಡೋಜ ಬರಗೂರು ರಾಮಚಂದ್ರಪ್ಪ | Speed News Kannada

Kannada is a secular language | ಕನ್ನಡ ಜಾತ್ಯಾತೀತ ಭಾಷೆ ಎಲ್ಲಾ ಧರ್ಮೀಯರು ಕನ್ನಡ ಸಾಹಿತ್ಯ ಕಟ್ಟಿದ್ದಾರೆ ನಾಡೋಜ ಬರಗೂರು ರಾಮಚಂದ್ರಪ್ಪ | Speed News Kannada

ಹಂಪಿ: ಕನ್ನಡ ಒಂದು ಜಾತ್ಯಾತೀತ ಭಾಷೆ. ಎಲ್ಲಾ ಜಾತಿ, ಧರ್ಮದ ಜನರು ಕನ್ನಡ ಸಾಹಿತ್ಯವನ್ನು ಕಟ್ಟುತ್ತಾ ಬಂದಿದ್ದಾರೆ. ಕನ್ನಡ ಸಮಾಜದೊಳಗೆ ಕ್ರಿಯಾಶೀಲರಾಗಿದ್ದಾರೆ. ಆದ್ದರಿಂದ ಕನ್ನಡವನ್ನು ಕೇಂದ್ರವನ್ನಾಗಿಟ್ಟುಕೊಂಡಿರುವ ಮತ್ತು ಸಂಶೋಧನೆಯನ್ನು ಜೀವಾಳವಾಗಿಸಿಕೊಂಡಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಹೆಚ್ಚು ಬೆಂಬಲ ಸಿಗಬೇಕು ಎಂದು ಸಂಸ್ಕೃತಿ ಚಿಂತಕ, ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಅಭಿಪ್ರಾಯಪಟ್ಟರು. 
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ನುಡಿಹಬ್ಬದ ಪ್ರಯುಕ್ತ ಪ್ರಸಾರಾಂಗವು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.  
ಇಂದು ಪ್ರಸಾರಾಂಗಗಳು ಭೂತ ಮತ್ತು ಭವಿಷ್ಯದ ಚಿಂತನೆಗಳ ಜೊತೆಗೆ ಹೆಚ್ಚು ಹೆಚ್ಚು ವರ್ತಮಾನದ ಜೊತೆ ಮುಖಾಮುಖಿಯಾಗುವ, ಅನುಸಂಧಾನಗೊಳ್ಳುವ ಪುಸ್ತಕಗಳ ಪ್ರಕಟಣೆಗೆ ಒತ್ತು ನೀಡಬೇಕು. ಇತ್ತೀಚಿಗೆ ವಾಣಿಜ್ಯ, ವಾಸ್ತುಶಿಲ್ಪ, ಫ್ಯಾಶನ್ ತಂತ್ರಜ್ಞಾನ, ಹೊಟೇಲ್ ಮ್ಯಾನೇಜ್‌ಮೆಂಟ್ ಶಿಸ್ತುಗಳು ಮುನ್ನಲೆಯಲ್ಲಿದ್ದು, ಮಾನವಿಕ ಶಿಸ್ತುಗಳನ್ನು ಅಧ್ಯಯನ ಮಾಡುವವರ ಪ್ರಮಾಣ ಶೇ. 5ರಷ್ಟಿದೆ. ಮಾನವಿಕ ಜ್ಞಾನ ಶಿಸ್ತುಗಳಿಗೆ ಹಿನ್ನಡೆಯಾಗುತ್ತಿದೆ. ಬದುಕನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಾನವಿಕ ಜ್ಞಾನಗಳ ಅಗತ್ಯವಿದೆ ಎಂದರು. ತಂತ್ರಜ್ಞಾನ ಇಂದು ಜ್ಞಾನವಾಗಿ ಉಳಿದಿಲ್ಲ, ಉದ್ಯಮವಾಗಿ ಹೋಗಿದೆ. ಮನುಷ್ಯ ಜ್ಞಾನಕ್ಕಿಂತ ತಂತ್ರಜ್ಞಾನ ಮೇಲುಗೈ ಪಡೆದಿದೆ. ತಂತ್ರಜ್ಞಾನವನ್ನು ವಿವೇಕ ಮತ್ತು ಔಚಿತ್ಯಪೂರ್ಣವಾಗಿ ಬಳಸಬೇಕು. ಎಂದಿಗೂ ಮನುಷ್ಯ ಜ್ಞಾನಕ್ಕೆ ಮೊದಲ ಆದ್ಯತೆ ಸಿಗಬೇಕು ಎಂದರು. ಪುಸ್ತಕಗಳ ಓದಿನ ಪ್ರವೇಶ ಪೂರ್ವಗ್ರಹಗಳಿಂದ ಮುಕ್ತವಾಗಿರಬೇಕು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬೇಕು ಆದರೆ ದ್ವೇಷಗಳಿರಬಾರದು, ಬೌದ್ಧಿಕ ವಿಭಜಕ ಪ್ರವೃತ್ತಿಗಳಿರಬಾರದು. ಲೇಖಕರಾದ ನಾವೆಲ್ಲರೂ ಜನರಿಗೆ ಸತ್ಯವನ್ನು ಹೇಳುವ ಮರ‍್ಯಾದಸ್ಥ ಮನುಷ್ಯರಾಗೋಣ ಎಂದು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿಗಳಾದ ಡಾ. ಚಂದ್ರಶೇಖರ ಕಂಬಾರ ಅವರು ಮಾತನಾಡುತ್ತಾ, ವಿಶ್ವವಿದ್ಯಾಲಯದ ಪ್ರಸಾರಾಂಗದ ಪುಸ್ತಕಗಳನ್ನು ಬಿಡುಗಡೆ ಮಾಡಲು ನನ್ನನ್ನು ಆಹ್ವಾನಿಸಿರುವುದು ನನಗೆ ಖುಷಿ ನೀಡಿದೆ. ವಿಶ್ವವಿದ್ಯಾಲಯಕ್ಕೆ ಒಳಿತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡಾ.ಚಂದ್ರಶೇಖರ ಕಂಬಾರ ಅವರಿಗೆ ಗಣ್ಯಮಾನ್ಯರು ಗೌರವ ಸನ್ಮಾನ ಮಾಡಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಮಾತನಾಡುತ್ತ, ಪ್ರಸಾರಾಂಗವು ಪ್ರಕಟಿಸಿರುವ 42 ಪುಸ್ತಕಗಳು ಮನುಷ್ಯನ ಬೌದ್ಧಿಕ ಜ್ಞಾನದ ಚಟುವಟಿಕೆಯ ಸಂಕೇತವಾಗಿವೆ. ಇತಿಹಾಸ, ಶಾಸನ, ಜಾನಪದ, ಸಂಸ್ಕೃತಿ ವಿಷಯಗಳ ಪುಸ್ತಕಗಳಿಂದ ಹಿಡಿದು ಎ.ಐ. ತಂತ್ರಜ್ಞಾನದವರೆಗೆ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಪ್ರಕಟಿಸಿರುವುದು ಇದರ ಹೆಗ್ಗಳಿಕೆ ಎಂದರು. 
ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಡಾ. ಚಂದ್ರಶೇಖರ ಕಂಬಾರ,  ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ,  ಪ್ರಾಧ್ಯಾಪಕರು, ಉಪಸ್ಥಿತರಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.