ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗುತ್ತಿದೆ. ಅಮೆರಿಕ ಮಂಡಿಸಿದ್ದ 45 ದಿನಗಳ ಕದನ ವಿರಾಮ ಪ್ರಸ್ತಾವನೆಯನ್ನು ಇರಾನ್ ನೇರವಾಗಿ ತಿರಸ್ಕರಿಸಿದೆ. ಪಾಕಿಸ್ತಾನವನ್ನು ಮಧ್ಯವರ್ತಿಯಾಗಿ ಬಳಸಿಕೊಂಡಿರುವ ಇರಾನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂದೆ ಹತ್ತು ಪ್ರಮುಖ ಷರತ್ತುಗಳನ್ನು ಇಟ್ಟಿದೆ.
"ನಮಗೆ ತಾತ್ಕಾಲಿಕ ಕದನ ವಿರಾಮದಲ್ಲಿ ಆಸಕ್ತಿಯಿಲ್ಲ, ಬದಲಿಗೆ ಈ ಯುದ್ಧಕ್ಕೆ ಶಾಶ್ವತ ಅಂತ್ಯ ಬೇಕು" ಎಂದು ಇರಾನ್ ತಿಳಿಸಿದೆ. ಇಸ್ಲಾಮಿಕ್ ರಿಪಬ್ಲಿಕ್ ನ್ಯೂಸ್ ಏಜೆನ್ಸಿ ವರದಿ ಮಾಡಿರುವಂತೆ, ಪಾಕಿಸ್ತಾನದ ಮೂಲಕ ಇರಾನ್ ತನ್ನ ಬೇಡಿಕೆಗಳ ಪಟ್ಟಿಯನ್ನು ಅಮೆರಿಕಕ್ಕೆ ರವಾನಿಸಿದೆ. ಇದರಲ್ಲಿ ಆರ್ಥಿಕ ನಿರ್ಬಂಧಗಳ ತೆರವು, ಹಾರ್ಮುಜ್ ಜಲಸಂಧಿಯ ಸುರಕ್ಷಿತ ಸಂಚಾರ ಪ್ರೋಟೋಕಾಲ್ ಹಾಗೂ ದೇಶದ ಪುನರ್ ನಿರ್ಮಾಣಕ್ಕೆ ನೆರವು ನೀಡುವಂತಹ 10 ಕಠಿಣ ಷರತ್ತುಗಳು ಸೇರಿವೆ.ಅಮೆರಿಕ ಸರ್ಕಾರ ಈ ಕದನ ವಿರಾಮದ ಬಗ್ಗೆ ಚರ್ಚೆ ನಡೆಸುತ್ತಿದ್ದರೂ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈವರೆಗೆ ಯಾವುದೇ ಅಧಿಕೃತ ಅನುಮೋದನೆ ನೀಡಿಲ್ಲ. ಅಷ್ಟೇ ಅಲ್ಲದೆ, ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳು ಇರಾನ್ ಮೇಲೆ ನಿರಂತರವಾಗಿ ಮುಂದುವರಿದಿವೆ.
ಕಳೆದ ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಈ ಯುದ್ಧ ಆರಂಭವಾಗಿತ್ತು. ಈಗ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ವಿಧಿಸಿರುವ ದಿಗ್ಬಂಧನದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಅನಿಲ ಬೆಲೆಗಳು ಗಗನಕ್ಕೇರಿದ್ದು, ವಿಶ್ವದ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ ಬೀರಿದೆ.ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿದ್ದರೂ, ಇರಾನ್‌ನ ಷರತ್ತುಗಳಿಗೆ ಟ್ರಂಪ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ. ಒಂದು ವೇಳೆ ಸಂಧಾನ ವಿಫಲವಾದರೆ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವ ಸಾಧ್ಯತೆಯಿದೆ.