ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನತೆ ದಿನೇ ದಿನೇ ಹೆಚ್ಚುತ್ತಿರುವ ನಡುವೆಯೇ, ಭಾರತಕ್ಕೆ ಇರಾನ್ ಮಹತ್ವದ ಭರವಸೆ ನೀಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಸುರಕ್ಷತೆ ಕುರಿತು ಸ್ಪಷ್ಟನೆ ನೀಡಲಾಗಿದೆ. ಪರ್ಷಿಯನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರವನ್ನು ಸಂಪರ್ಕಿಸುವ ಅತ್ಯಂತ ಪ್ರಮುಖ ಜಲಮಾರ್ಗವಾದ ಹೊರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರಿದಿದೆ.
ಈ ಹಿನ್ನೆಲೆಯಲ್ಲಿ ಇರಾನ್ ಭಾರತಕ್ಕೆ ಭರವಸೆ ನೀಡಿದೆ. ಇರಾನ್ ರಾಯಭಾರ ಕಚೇರಿ ಎಕ್ಸ್ ಮೂಲಕ ಪ್ರತಿಕ್ರಿಯಿಸಿ, ‘ಸಂಘರ್ಷ ಮುಂದುವರಿದಿದ್ದರೂ ಭಾರತೀಯ ಹಡಗುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ ಕೈಯಲ್ಲಿದ್ದಾರೆ’ ಎಂದು ತಿಳಿಸಿದೆ.
ಇನ್ನೊಂದೆಡೆ, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವಾಲಯ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿವೆ. ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಸಾಗರ ಮಾರ್ಗದ ಭದ್ರತೆಗಾಗಿ ಇರಾನಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿವೆ. ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಕಡಿಮೆಯಾಗುವ ಲಕ್ಷಣಗಳು ಕಾಣಿಸದಿದ್ದರೂ, ಭಾರತಕ್ಕೆ ಬಂದಿರುವ ಈ ಭರವಸೆ ಕೆಲವು ಮಟ್ಟಿಗೆ ನೆಮ್ಮದಿಯನ್ನು ನೀಡಿದೆ. ಮುಂದಿನ ಬೆಳವಣಿಗೆಗಳತ್ತ ವಿಶ್ವದ ಕಣ್ಣು ನೆಟ್ಟಿದೆ.