ಇರಾನ್, ಇಸ್ರೇಲ್ ಹಾಗೂ ಅಮೆರಿಕ ದಾಳಿಯಿಂದ ಹೊರ್ಮುಜ್ ಜಲಸಂಧಿಯಿಂದ ಬರುವ ತೈಲ ಉತ್ಪನ್ನಗಳೆಲ್ಲಾ ಕಮ್ಮಿಯಾಗಿವೆ. ಆದ್ದರಿಂದ ಭಾರತ ತನ್ನ ಕಚ್ಛಾ ತೈಲ ಅಗತ್ಯಗಳನ್ನು ರಷ್ಯಾದಿಂದ ಪಡೆಯುತ್ತಿದೆ. ಮುಂದಿನ ತಿಂಗಳಿಗಾಗಿ ಭಾರತವು ರಷ್ಯಾದಿಂದ 60 ಮಿಲಿಯನ್ ಬ್ಯಾರಲ್ ಕಚ್ಛಾ ತೈಲವನ್ನು ಖರೀದಿ ಮಾಡಿದೆ ಎಂದು ಬ್ಲೂಮ್ಬರ್ಗ್ ಸುದ್ದಿ ಏಜೆನ್ಸಿಯು ವರದಿ ಮಾಡಿದೆ.
ಭಾರತ ಏಪ್ರಿಲ್ ತಿಂಗಳ ಆರಂಭದಿಂದಲೇ 60 ಮಿಲಿಯನ್ ಕಚ್ಛಾತೈಲವನ್ನು ಖರೀದಿಸಿದೆ. ಮಾರ್ಚ್ ತಿಂಗಳಿಗಾಗಿಯೂ ಇದೇ ಪ್ರಮಾಣದ ತೈಲ ಪಡೆಯಲಾಗಿತ್ತು. ಇರಾನ್ ಯುದ್ಧ ಶುರುವಾದ ಬಳಿಕ ತೈಲ ಪೂರೈಕೆಗೆ ವ್ಯತ್ಯಯ ಆಗುತ್ತಿದ್ದಂತೆಯೇ ಭಾರತವು ರಷ್ಯಾದಿಂದ ತೈಲ ಪಡೆಯಲು ಆರಂಭಿಸಿತು. ಚೀನಾ ಮತ್ತಿತರೆಡೆ ಹೋಗಲು ಅಣಿಯಾಗಿದ್ದ ರಷ್ಯನ್ ತೈಲ ಹಡಗುಗಳು ಭಾರತದ ಬಂದರುಗಳ ಕಡೆಗೆ ಬಂದಿದ್ದವು. ಗಲ್ಫ ದೇಶಗಳಿಂದ ಬರುತ್ತಿದ್ದ ತೈಲವು ಹೊರ್ಮುಜ್ ಜಲಸಂಧಿಯಲ್ಲೇ ಸಿಲುಕಿಹಾಕಿಕೊಂಡಿರುವುದರಿಂದ ರಷ್ಯಾದಿಂದ ತೈಲ ಪಡೆಯುವುದು ಭಾರತಕ್ಕೆ ಅನಿವಾರ್ಯವಾಗಿದೆ. ಭಾರತ ಇದೀಗ ರಷ್ಯಾದಿಂದ ಮಾತ್ರವಲ್ಲ, ಒಂದಷ್ಟು ಪ್ರಮಾಣದ ತೈಲವನ್ನು ವೆನಿಜುವೆಲಾದಿಂದಲೂ ಪಡೆಯುತ್ತಿದೆ. ಏಪ್ರಿಲ್ನಲ್ಲಿ ವೆನಿಜುವೆಲಾದಿಂದ 8 ಮಿಲಿಯನ್ ಬ್ಯಾರಲ್ ಕಚ್ಛಾ ತೈಲವನ್ನು ಪಡೆಯಲಿದೆ.