ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ವಿಧಿಯಾಟಕ್ಕೆ ದಂಪತಿಗಳಿಬ್ಬರು ಒಂದೇ ದಿನ ಬಲಿಯಾಗಿರುವ ಅತ್ಯಂತ ಧಾರುಣ ಘಟನೆ ಸಂಭವಿಸಿದೆ. ಮಧುರಾ ಕರೆಪ್ಪ ಮಾದರ (30) ಎಂಬುವವರು ದೀರ್ಘಕಾಲದ ಹೊಟ್ಟೆನೋವಿನಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಪತ್ನಿಯ ಸ್ಥಿತಿ ಗಂಭೀರವಾಗಿರುವ ವಿಷಯ ತಿಳಿದು, ಆಸ್ಪತ್ರೆಗೆ ಧಾವಿಸುತ್ತಿದ್ದ ಪತಿ ಕರೆಪ್ಪ ಗಂಗಪ್ಪ ಮಾದರ (36) ಅವರು ಸಂಚರಿಸುತ್ತಿದ್ದ ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದೆ. ಅರವಳ್ಳಿ ಕ್ರಾಸ್ ಬಳಿ ನಡೆದ ಈ ಭೀಕರ ಅಪಘಾತದಲ್ಲಿ ಕರೆಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು, ದಂಪತಿಗಳಿಬ್ಬರ ಸಾವು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.
ಮದುವೆಯಾಗಿ ಒಂಬತ್ತು ವರ್ಷಗಳ ಕಾಲ ಸುಖವಾಗಿದ್ದ ಈ ದಂಪತಿಗೆ ಒಂದು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ. ಒಂದೇ ದಿನ ತಂದೆ-ತಾಯಿಯನ್ನು ಕಳೆದುಕೊಂಡ ಮೂವರು ಪುಟ್ಟ ಮಕ್ಕಳು ಈಗ ಅನಾಥರಾಗಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಟುಂಬಸ್ಥರ ರೋದನೆ ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸಿದೆ. ಪತ್ನಿಯ ಸಾವಿನ ಸುದ್ದಿ ಕೇಳುವ ಮುನ್ನವೇ ಪತಿಯೂ ಅಪಘಾತದಲ್ಲಿ ಮೃತಪಟ್ಟಿರುವುದು ವಿಧಿಯ ಕ್ರೂರತೆಗೆ ಸಾಕ್ಷಿಯಂತಿದೆ.