2026-04-24 12:19:31

Husband arrested for torturing wife, children|ಪತ್ನಿ ಮಕ್ಕಳನ್ನು ಕೂಡಿ ಹಾಕಿ ಚಿತ್ರಹಿಂಸೆ ಆರೋಪಿ ಪತಿ ಬಂಧನ|Speed News Kannada

Husband arrested for torturing wife, children|ಪತ್ನಿ ಮಕ್ಕಳನ್ನು ಕೂಡಿ ಹಾಕಿ ಚಿತ್ರಹಿಂಸೆ  ಆರೋಪಿ ಪತಿ ಬಂಧನ|Speed News Kannada

ಬೆಳಗಾವಿಯ ಟಿಳಕವಾಡಿ ಪ್ರದೇಶದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಮನೆಯಲ್ಲೇ ಕೂಡಿ ಹಾಕಿ ದೈಹಿಕ ಹಾಗೂ ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯಿಂದ ಬಂದ ಫೋನ್ ಕರೆಯ ಮಾಹಿತಿಯ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾದ ಬೆಳಗಾವಿಯ 'ಅಕ್ಕ ಪಡೆ' ಮತ್ತು ಪೊಲೀಸ್ ಅಧಿಕಾರಿಗಳು, ಸ್ಥಳಕ್ಕೆ ಧಾವಿಸಿ ಸಂತ್ರಸ್ತ ಮಹಿಳೆಯನ್ನು ರಕ್ಷಿಸಿದ್ದಾರೆ. ರಕ್ಷಣೆಗೊಳಗಾದ ಮಹಿಳೆ ಮತ್ತು ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಪೊಲೀಸರು ಅವರನ್ನು ವಿಮಾನದ ಮೂಲಕ ದೆಹಲಿಯಲ್ಲಿರುವ ಅವರ ತವರು ಮನೆಗೆ ಕಳುಹಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಫೆಬ್ರವರಿ 17, 2026 ರಂದು ಆರಂಭವಾದ ಈ 'ಅಕ್ಕ ಪಡೆ' ಮಹಿಳೆಯರ ಸುರಕ್ಷತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ತಂಡವು ಈಗಾಗಲೇ ಶಾಲೆ, ಕಾಲೇಜು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ 90ಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮಹಿಳಾ ಹಕ್ಕುಗಳು, POCSO ಕಾಯ್ದೆ ಮತ್ತು ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸುತ್ತಿದೆ. ಈ ಕಾರ್ಯಾಚರಣೆಯನ್ನು ಪಿಎಸ್‌ಐ ರುಕ್ಮಿಣಿ ಮತ್ತು ತಂಡ ಯಶಸ್ವಿಯಾಗಿ ನಡೆಸಿದ್ದು, ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರು ಅಕ್ಕ ಪಡೆಯ ಕಾರ್ಯದಕ್ಷತೆಯನ್ನು ಶ್ಲಾಘಿಸಿದ್ದಾರೆ.

ಇಲ್ಲಿಯವರೆಗೆ ಅಕ್ಕ ಪಡೆಯು ಇಬ್ಬರು ಮಹಿಳೆಯರನ್ನು ರಕ್ಷಿಸುವುದರ ಜೊತೆಗೆ, ಎಂಟು ಕೌಟುಂಬಿಕ ಕಲಹಗಳನ್ನು ಬಗೆಹರಿಸಿದೆ. ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಕಿರುಕುಳ ನೀಡುವವರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆಯಡಿ 55 ಪ್ರಕರಣಗಳನ್ನು ದಾಖಲಿಸುವ ಮೂಲಕ ನಗರದಲ್ಲಿ ಮಹಿಳೆಯರ ರಕ್ಷಣೆಗೆ ಭದ್ರ ಬುನಾದಿ ಹಾಕಿದೆ. ಸಾರ್ವಜನಿಕ ವಲಯದಲ್ಲಿ ಅಕ್ಕ ಪಡೆಯ ಈ ಸಮಯೋಚಿತ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.