ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಳೂರಗಿ ಗ್ರಾಮದ ಬಳಿ ಹಾಡಹಗಲೇ ಕತ್ತು ಕೊಯ್ದು ಪತ್ನಿಯನ್ನ ಕೊಲೆ ಮಾಡಿರುವ ಘಟನೆ ನಡೆದಿದೆ. ಮಹಾರಾಷ್ಟ್ರ ಮೂಲದ ಶೈಲಾ (28) ಎಂಬ ಮಹಿಳೆಯನ್ನು ಆಕೆಯ ಪತಿ ಅಕ್ಷಯ್ ನಿರ್ದಯವಾಗಿ ಕರೆತಂದು ಹತ್ಯೆ ಮಾಡಿದ್ದಾನೆ.
ಆರೋಪಿ ಅಕ್ಷಯ್ ತನ್ನ ಎರ್ಟಿಗಾ ಕಾರಿನಲ್ಲಿ ಪತ್ನಿಯನ್ನು ಕರೆದುಕೊಂಡು ಬಂದು, ಬಳೂರಗಿ ಗ್ರಾಮದ ಬಳಿ ವಾಹನ ನಿಲ್ಲಿಸಿದ್ದಾನೆ. ನಂತರ ಪತ್ನಿಯನ್ನು ಬಲವಂತವಾಗಿ ಕಾರಿನಿಂದ ಕೆಳಗಿಳಿಸಿ, ನಡುರಸ್ತೆಯಲ್ಲೇ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಹತ್ಯೆಯ ಬಳಿಕ ಶವದ ಮೇಲೆ ಕಾರು ಹಾಯಿಸಿ ವಿಕೃತಿ ಮೆರೆದಿದ್ದಾನೆ. ಈ ಘಟನೆ ಸ್ಥಳೀಯರೊಬ್ಬರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕೊಲೆಮಾಡುವ ದೃಶ್ಯ ಎದೆ ಝಲ್ ಎನ್ನಿಸುವಂತಿದೆ. ಘಟನೆಯ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಪತ್ನಿಯ ಅನೈತಿಕ ಸಂಬಂಧದ ಅನುಮಾನದಿಂದ ಕೋಪಗೊಂಡು ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.