ಮಧ್ಯಪ್ರಾಚ್ಯದಲ್ಲಿ ನಡೆಯುವ ಯುದ್ದದಿಂದಾಗಿ ಚಿನ್ನ ಹಾಗೂ ಬೆಳ್ಳಿದರದಲ್ಲಿ ದಿನೇ ದಿನೇ ಏರಿಳಿತ ಕಂಡುಬರುತ್ತಿದೆ. ಇವೆಲ್ಲದರ ನಡುವೆಯೇ ಬೆಂಗಳೂರು ನಗರದಲ್ಲಿ ಚಿನ್ನ ಖರೀದಿ ಹಾಗೂ ಬುಕ್ಕಿಂಗ್ ಜೋರಾಗಿದೆ. ಚಿನ್ನದ ದರದಲ್ಲಿ ನಿತ್ಯವು ಹಾವು-ಏಣಿ ಆಟ ಮುಂದುವರೆದಿದ್ದು, ಕಳೆದ ತಿಂಗಳಿನಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರಿದ್ದು ಗ್ರಾಹಕರ ಕೈಗೆಟುಕದ ಮಟ್ಟಿಗೆ ತಲುಪಿತ್ತು. ಆದ್ರೆ ಇತ್ತಿಚಿಗೆ ಅಭರಣ ಬೆಲೆಗಳಲ್ಲಿ ಇಳಿಕೆಯನ್ನು ಕಂಡಿದ್ದು, ಅಭರಣ ಪ್ರಿಯರಿಗೆ ಹೊಸ ಉತ್ಸಾಹ ಮೂಡಿಸಿದೆ. ಚಿನ್ನದ ಹಾವು-ಏಣಿ ಆಟದಿಂದಾಗಿ ಅಕ್ಷಯ ತೃತೀಯ ವೇಳೆಗೆ ಚಿನ್ನದ ಅತಿಯಾದ ಬೆಲೆ ಏರಿಕೆ ಆಗಬಹುದು ಎಂಬ ನಿರೀಕ್ಷೆಯಿಂದ ಜನರು ಈಗಲೇ ಚಿನ್ನ ಖರೀದಿ ಮಾಡಲು ಹಾಗೂ ಬುಕ್ಕಿಂಗ್ ಮಾಡಲು ಮುಗಿಬಿದ್ದಿದ್ದಾರೆ. ಜ್ಯುವೆಲ್ಲರಿ ಅಂಗಡಿಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಗ್ರಾಹಕರ ಸಂಖ್ಯೆ ಶೇ 50ರಷ್ಟು ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಹಲವರು ಪೂರ್ಣ ಹಣ ಪಾವತಿಸಿ ಈಗಲೇ ಚಿನ್ನ ಕಾಯ್ದಿರಿಸುತ್ತಿದ್ದು, ಆರ್ಡರ್‌ಗಳೂ ಹೆಚ್ಚುತ್ತಿರುವುದಾಗಿ ಹೇಳಲಾಗುತ್ತಿದೆ. ಒಟ್ಟಾರೆ, ಚಿನ್ನದ ದರದ ಏರಿಳಿತ ನಡುವೆಯೇ ‘ಇದೀಗ ಇರುವ ದರವೇ ಸೂಕ್ತ’ ಎಂದು ಭಾವಿಸಿರುವ ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದಾರೆ. ಮುಂದಿನ ದಿನಗಳಲ್ಲಿ ದರ ಇಳಿಕೆಯಾಗುತ್ತದೆಯೋ ಅಥವಾ ಮತ್ತೆ ಏರಿಕೆಯಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.