ಪಶ್ಚಿಮ ಏಷ್ಯಾ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಹೋಟೆಲ್ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕೋಟೆನಗರಿಯ ಹೋಟೆಲ್‌ಗಳಲ್ಲೂ ಗ್ಯಾಸ್ ಸಿಲಿಂಡರ್ ಖಾಲಿಯಾಗುತ್ತಿದ್ದು ಮಾಲೀಕರು ಸೌದೆ ಒಲೆ ಹುಡುಕಾಟ ಆರಂಭಿಸಿದ್ದಾರೆ. ವಾಣಿಜ್ಯ ಬಳಕೆಯ ಅನಿಲ ಪೂರೈಕೆ ಸ್ಥಗಿತಗೊಂಡಿರುವ ಕಾರಣ ಹೋಟೆಲ್‌ಗಳು ತಮ್ಮ ಪ್ರತಿದಿನದ ಆಹಾರ ಮೆನುವನ್ನು ಕಡಿತಗೊಳಿಸಿವೆ. ಸಂಗ್ರಹದಲ್ಲಿರುವ ಅನಿಲವನ್ನು ಬಹಳ ಎಚ್ಚರಿಕೆಯಿಂದ ಬಳಸಲಾಗುತ್ತಿದೆ. ವಾರದೊಳಗೆ ಸಮಸ್ಯೆ ಸರಿಯಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿದ್ದರೂ ಹೋಟೆಲ್ ಮಾಲೀಕರ ಆತಂಕ ಕಡಿಮೆಯಾಗಿಲ್ಲ. ಹೋಟೆಲ್ ನಿರ್ವಹಣೆ, ಕೆಲಸಗಾರರ ಸಂಬಳದ ಖರ್ಚು ಹೊರೆಯಾಗುತ್ತಿದೆ. ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಆವರಿಸಿದ್ದ ಆತಂಕ ಈಗ ಮತ್ತೆ ಮರುಕಳಿಸಿದೆ.
'ಜಿಲ್ಲೆಯಲ್ಲಿ ಗೃಹ ಬಳಕೆಯ ಅನಿಲಕ್ಕೆ ಕೊರತೆಯಿಲ್ಲ, ಅನವಶ್ಯಕವಾಗಿ ಆತಂಕಗೊಳ್ಳುವುದು ಬೇಡ' ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಆದರೆ, ಸಾರ್ವಜನಿಕ ವಲಯದಲ್ಲಿ ಆತಂಕ ಆವರಿಸಿದ್ದು ಪರ್ಯಾಯ ಮಾರ್ಗಗಳತ್ತ ಜನರೂ ಚಿಂತಿಸುತ್ತಿದ್ದಾರೆ. ಸಿಲಿಂಡರ್ ಬುಕಿಂಗ್ ಸಂಖ್ಯೆಗೆ ಕರೆ ಮಾಡಿದರೆ, 1 ಸಿಲಿಂಡರ್ ಬುಕ್ ಮಾಡಿದ 24 ದಿನಗಳವರೆಗೆ ಇನ್ನೊಂದು ಬುಕಿಂಗ್ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶ ಬರುತ್ತಿರುವ ಕಾರಣ ಸಾರ್ವಜನಿಕರೂ ಆತಂಕಕೊಂಡಿದ್ದಾರೆ. ಸೌದೆ ಒಲೆ, ಎಲೆಕ್ನಿಕ್ ಸ್ಟೆ ಖರೀದಿಯಲ್ಲಿ ತೊಡಗಿದ್ದಾರೆ.
ಹೋಟೆಲ್‌ಗಳಲ್ಲಿ ಅಡುಗೆ ಅನಿಲದ ಸಂಗ್ರಹ ಮುಗಿಯುತ್ತಾ ಬಂದಿದ್ದು, ಅವರೂ ಸೌದೆ ಒಲೆಯತ್ತ ಬದಲಾಗುತ್ತಿದ್ದಾರೆ. ನಗರದ ಹಲವು ಹೋಟೆಲ್‌ಗಳಲ್ಲಿ, ಹೆಚ್ಚಾಗಿ ಮಾಂಸಾಹಾರದ ಹೋಟೆಲ್‌ಗಳಲ್ಲಿ ಈಗಾಗಲೇ ಸೌದೆ ಒಲೆ ಇದ್ದು, ಅದೇ ಆಧಾರವಾಗುತ್ತಿದೆ. ಒಲೆ ಇಲ್ಲದ ಹೋಟೆಲ್‌ಗಳ ಮಾಲೀಕರು ಹೆಚ್ಚು ಹೊಗೆ ಬಾರದ, ಕಣ್ಣುಗಳಿಗೆ ಉರಿ ಕಾಡದ ಸೌದೆ ಒಲೆ ಹುಡುಕಾಟ ಮಾಡುತ್ತಿದ್ದಾರೆ. ಬೆಲೆ ಎಷ್ಟಾದರೂ ಸರಿ ಅತ್ಯಾಧುನಿಕವಾದ ಸೌದೆ ಒಲೆ ಖರೀದಿಗೆ ಮುಗಿಬಿದಿದ್ದಾರೆ.
'ಕೊಯಮತ್ತೂರಿನಲ್ಲಿ ವ್ಯಕ್ತಿಯೊಬ್ಬರು ಹೊಗೆ ಬಾರದ ಸೌದೆ ಒಲೆ ಸಂಶೋಧಿಸಿದ್ದಾರೆ. ಅವರಿಗೆ ಕರೆ ಮಾಡಿ ಕಳುಹಿಸಿಕೊಡುವಂತೆ ಕೇಳಿಕೊಂಡೆ. ಬೇಡಿಕೆ ತೀವುಗೊಂಡಿರುವ ಕಾರಣ ಅವರು ಹೊಸದಾಗಿ ತಯಾರಿಸಿ ಕಳುಹಿಸಬೇಕು. ತಿಂಗಳವರೆಗೂ ಬುಕಿಂಗ್ ಇರುವ ಕಾರಣ ಒಲೆ ಕಳುಹಿಸಲು ಸಾಧ್ಯವಿಲ್ಲ ಎಂದುಬಿಟ್ಟರು. ಹೀಗಾಗಿ ಬೇರೆ ಒಲೆಗಾಗಿ ಹುಡುಕಾಟ ಮುಂದುವರಿಸಿದ್ದೇನೆ' ಎಂದು ನಗರದ ಐಶ್ವರ್ಯ ಫೋರ್ಟ್ ಹೋಟೆಲ್ ಮಾಲೀಕ ಅರುಣ್ ಕುಮಾರ್ ಹೇಳಿದರು. ಕುಗ್ಗಿದ ಮೆನು: ಅಡುಗೆ ಅನಿಲ ಕೊರತೆಯಿಂದಾಗಿ ಜಿಲ್ಲೆಯ ಹಲವು ಹೋಟೆಲ್‌ಗಳು ಈಗಾಗಲೇ ಬಾಗಿಲು ಮುಚ್ಚಿವೆ. ಹಲವು ಹೋಟೆಲ್‌ಗಳು ತೆರೆದಿದ್ದರೂ ಹೋಟೆಲ್‌ನಲ್ಲಿ ತಯಾರಿಸುವ ತಿನಿಸುಗಳನ್ನು ಕಡಿತಗೊಳಿಸಿವೆ. ಬೆಳಿಗ್ಗೆ 10.30ರವರೆಗೆ ಮಾತ್ರ ತಿಂಡಿ ನೀಡಲಾಗುತ್ತಿದೆ.
ಮಸಾಲಾ ದೋಸೆ, ಬೆಣ್ಣೆ ದೋಸೆ ಬೆಳಿಗ್ಗೆ 10.30ರ ನಂತರ ದೊರೆಯುತ್ತಿಲ್ಲ. ಸಂಜೆ ನೀಡುತ್ತಿದ್ದ ಗೋಬಿ ಮಂಚೂರಿ, ಪಾನಿ ಪುರಿ ಸೇರಿದಂತೆ ಚಾಟ್ಸ್ ಸ್ಥಗಿತಗೊಳಿಸಲಾಗಿದೆ. ಹಲವು ಹೋಟೆಲ್‌ಗಳಲ್ಲಿ ರಾತ್ರಿ ಊಟವೂ ಸಿಗುತ್ತಿಲ್ಲ.
'ಈಗಿನ ಸ್ಥಿತಿ ಹೋಟೆಲ್ ಉದ್ಯಮಕ್ಕೆ ಕೊರೊನಾ ಸೋಂಕು ತಗುಲಿದಂತಿದೆ. ಸಾಕಷ್ಟು ಸಿಲಿಂಡರ್ ಸಂಗ್ರಹ ಮಾಡಿಟ್ಟುಕೊಂಡಿರುವವರು ಕೆಲವು ದಿನ ಹೋಟೆಲ್ ನಡೆಸುತ್ತಾರೆ. ದಿನದಿನವೂ ಸಿಲಿಂಡರ್ ಖರೀದಿ ಮಾಡುವವವರು ಬಂದ್ ಮಾಡಬೇಕು. ಹಣ್ಣು ಹಂಪಲು ತಿಂದುಕೊಂಡು ಡಯಟ್ ಮಾಡುವವರಿಗೆ ಇದು ಉತ್ತಮ ಕಾಲ' ಎಂದು ಹೋಟೆಲ್ ಮಾಲೀಕರೊಬ್ಬರು ಅಭಿಪ್ರಾಯಪಟ್ಟರು. ಐಒಸಿಎಲ್, ಬಿಪಿಸಿಎಲ್, ಎಚ್‌ಪಿಸಿಎಲ್ ಕಂಪನಿಗಳಿಂದ ಜಿಲ್ಲೆಯಲ್ಲಿ 4,14,512 ಮನೆ ಬಳಕೆಯ ಅಡುಗೆ ಅನಿಲ ಸಂಪರ್ಕಗಳಿವೆ. ಸಿದ್ರಾಮ ಮಾರಿಹಾಳ್, ಜಂಟಿ ನಿರ್ದೇಶಕ ಆಹಾರ ನಾಗರಿಕ ಸರಬರಾಜು ಇಲಾಖೆವಾಣಿಜ್ಯ ಬಳಕೆಯ ಅಡುಗೆ ಅನಿಲಕ್ಕೆ ಕೊರತೆಯಾಗಿರುವುದು ನಿಜ. ಸಮಸ್ಯೆ ಬಗೆಹರಿಸುವ ಪ್ರಯತ್ನಗಳು ಸರ್ಕಾರದ ಹಂತದಲ್ಲಿ ನಡೆಯುತ್ತಿವೆ. ಗೃಹಬಳಕೆಯ ಸಿಲಿಂಡರ್ ಸರಬರಾಜಿನಲ್ಲಿ ವ್ಯತ್ಯಯವಾಗಿಲ್ಲ.
ಚಾಪೆರೆಡ್ಡಿ, ಹೋಟೆಲ್‌ನಲ್ಲಿ ವಿಶಿಷ್ಟ್ಯ ಒಲೆ ಮಾಂಸಪ್ರಿಯರಿಗೆ ಅಚ್ಚುಮೆಚ್ಚು ಎನಿಸಿರುವ ನಗರದ ಚಾಪೆರೆಡ್ಡಿ ಹೋಟೆಲ್‌ನಲ್ಲಿ ವಿಶಿಷ್ಟ ರೀತಿಯ ಸೌದೆಒಲೆಯೊಂದು ಬಳಕೆಯಾಗುತ್ತಿದೆ. 2 ವರ್ಷಗಳ ಹಿಂದೆ ಖರೀದಿಸಿದ್ದ ಈ ಒಲೆ ಈಗ ನೆರವಿಗೆ ಬಂದಿದೆ. ಎಲೆಕ್ನಿಕ್ ಸ್ಟೈನಂತಿರುವ ಈ ಒಲೆ ಹೆಚ್ಚು ಬೆಂಕಿ ಕಡಿಮೆ ಹೊಗೆ ಸೂಸುತ್ತದೆ. ಸೌದೆಯ ಜೊತೆಗೆ ಚಾರ್ಜಿಂಗ್ ಬ್ಯಾಟರಿಯನ್ನು ಒಲೆಗೆ ಸಂಪರ್ಕಿಸಿದರೆ ಹೆಚ್ಚು ಉರಿ (ಪ್ರೇಮ್) ಸಿಗುತ್ತದೆ ಬೇಗ ಅಡುಗೆಯೂ ತಯಾರಾಗುತ್ತದೆ. ಬೆಂಗಳೂರು ರಸ್ತೆಯಲ್ಲಿರುವ ಗಿರೀಶ್ ಅವರ ಕಾರ್ಖಾನೆಯಲ್ಲಿ ಈ ಒಲೆ ಖರೀದಿಸಿದ್ದಾರೆ. 'ತುರ್ತು ಸಂದರ್ಭದಲ್ಲಿ ಈ ಒಲೆ ಹೇಳಿ ಮಾಡಿಸಿದಂತಿದೆ. ಅಟ್ಟದ ಮೇಲಿಟ್ಟಿದ್ದ ಒಲೆಯನ್ನು ಕೆಳಗಿಳಿಸಿ ಈಗ ಬಳಸುತ್ತಿದ್ದೇವೆ ಬ್ಯಾಟರಿ ಸುಸ್ಥಿತಿಯಲ್ಲಿದೆ. ಈಗಿನ ಪರಿಸ್ಥಿಯಲ್ಲಿ ಈ ಒಲೆ ಆಧಾರವಾಗಿದೆ' ಎಂದು ಚಾಪೆರೆಡ್ಡಿ ಹೋಟೆಲ್ ಮಾಲೀಕ ಸತ್ಯನಾರಾಯಣ ರೆಡ್ಡಿ ಹೇಳಿದರು.
'ಮನೆರುಚಿ'ಗೆ ಇಂದಿನಿಂದ ರಜೆ ಸದಾ ಪ್ರವಾಸಿಗರಿಂದಲೇ ತುಂಬಿ ತುಳುಕುವ ಇಡ್ಲಿ-ದೋಸೆಗೆ ಪ್ರಸಿದ್ಧಿ ಪಡೆದಿರುವ 'ಮನೆ ರುಚಿ' ಹೋಟೆಲ್ ನಗರದಲ್ಲಿ 2 ಶಾಖೆಗಳನ್ನು ಹೊಂದಿದೆ. 'ದೊಡ್ಡಪೇಟೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಸಮೀಪದ ಹೋಟೆಲ್‌ಗಳು ಸದಾ ಗ್ರಾಹಕರಿಂದ ತುಂಬಿ ತುಳುಕುತ್ತವೆ. ಅಡುಗೆ ಅನಿಲ ಕೊರತೆಯಾಗಿರುವ ಕಾರಣ ಮಾಲೀಕರು ದೊಡ್ಡಪೇಟೆ ಹೋಟೆಲ್‌ಗೆ ಶುಕ್ರವಾರದಿಂದ ರಜೆ ಘೋಷಣೆ ಮಾಡಿದ್ದಾರೆ. 'ಅನಿಲ ಕಂಪನಿಗಳು ಏಜೆನ್ಸಿಗಳಿಂದ ಭರವಸೆ ಸಿಗುತ್ತಿಲ್ಲ. ಈಗಾಗಲೇ ಪೂರೈಕೆ ಸ್ಥಗಿತಗೊಂಡಿದ್ದು ಹೋಟೆಲ್ ನಡೆಸುವುದು ಬಲು ಕಷ್ಟವಾಗಲಿದೆ. ಹೀಗಾಗಿ ಒಂದು ಹೋಟೆಲ್‌ಗೆ ರಜೆ ಘೋಷಣೆ ಮಾಡುತ್ತಿದ್ದೇವೆ' ಎಂದು ಮನೆರುಚಿ ಮಾಲೀಕ ಮೃತ್ಯುಂಜಯ ಹೇಳಿದರು.