2026-04-24 12:19:27

ಹಾಜಬ್ಬಗೆ ಗೌರವ ಡಾಕ್ಟರೇಟ್ ಪುರಸ್ಕಾರ ಘೋಷಣೆ| Speed News Kannada

 ಹಾಜಬ್ಬಗೆ ಗೌರವ ಡಾಕ್ಟರೇಟ್ ಪುರಸ್ಕಾರ ಘೋಷಣೆ| Speed News Kannada

ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಗ್ರಾಮದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಘೋಷಿಸುವ ಮೂಲಕ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದೆ. ವಿಶ್ವವಿದ್ಯಾನಿಲಯದ 44ನೇ ವಾರ್ಷಿಕ ಘಟಿಕೋತ್ಸವದ ಸಂದರ್ಭದಲ್ಲಿ, ಅಂದರೆ ಮಾರ್ಚ್ 28ರಂದು ಈ ಪ್ರತಿಷ್ಠಿತ ಪದವಿಯನ್ನು ಅವರಿಗೆ ಪ್ರದಾನ ಮಾಡಲಾಗುವುದು. ಶಿಕ್ಷಣದ ಹಂಗಿಲ್ಲದಿದ್ದರೂ ಸಾವಿರಾರು ಮಕ್ಕಳ ಭವಿಷ್ಯಕ್ಕೆ ಬೆಳಕಾದ ಹಾಜಬ್ಬ ಅವರಿಗೆ ಈ ಗೌರವವು ಅನ್ವರ್ಥವಾಗಿದೆ.

 ಹಾಜಬ್ಬ ಅವರ ಜೀವನ ಯಾನವು ಅತ್ಯಂತ ಸ್ಫೂರ್ತಿದಾಯಕವಾದುದು. ವೃತ್ತಿಯಿಂದ ಕಿತ್ತಳೆ ಹಣ್ಣು ಮಾರಾಟಗಾರರಾಗಿದ್ದ ಅವರು, ತಾನು ಶಿಕ್ಷಣದಿಂದ ವಂಚಿತನಾದಂತೆ ತನ್ನ ಗ್ರಾಮದ ಮಕ್ಕಳು ಆಗಬಾರದು ಎಂಬ ದೃಢ ಸಂಕಲ್ಪ ತೊಟ್ಟವರು. ತಮ್ಮ ದೈನಂದಿನ ವ್ಯಾಪಾರದಿಂದ ಬಂದ ಅಲ್ಪ ಆದಾಯದ ಉಳಿತಾಯವನ್ನೇ ಬಳಸಿಕೊಂಡು ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಆರಂಭಿಸಿದರು. ಇಂದು ಅದು ಉನ್ನತ ಶಾಲೆಯಾಗಿ ಬೆಳೆದು ನಿಂತಿರುವುದು ಅವರ ಅವಿರತ ಶ್ರಮ ಮತ್ತು ತ್ಯಾಗಕ್ಕೆ ಸಾಕ್ಷಿಯಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಈ ಅದ್ವಿತೀಯ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು 2021ರಲ್ಲಿ ಅವರಿಗೆ 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಿತ್ತು. ಇದರೊಂದಿಗೆ ಅನೇಕ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪುರಸ್ಕಾರಗಳು ಅವರನ್ನರಸಿ ಬಂದಿವೆ. ಇದೀಗ ಮಂಗಳೂರು ವಿಶ್ವವಿದ್ಯಾನಿಲಯವು ನೀಡುತ್ತಿರುವ ಗೌರವ ಡಾಕ್ಟರೇಟ್, ಅವರ ಸರಳ ವ್ಯಕ್ತಿತ್ವ ಮತ್ತು ಸಮಾಜಮುಖಿ ಕಾರ್ಯಕ್ಕೆ ಸಂದ ಜಯವಾಗಿದ್ದು, ಇಡೀ ನಾಡಿಗೆ ಹೆಮ್ಮೆಯ ವಿಷಯವಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.