ಜಮ್ಮು ಮತ್ತು ಕಾಶ್ಮೀರದ ಶ್ರೀನಗರ-ಲೇಹ್ ಹೆದ್ದಾರಿಯ ಝೋಜಿಲಾ ಪಾಸ್‌ನಲ್ಲಿ ಶುಕ್ರವಾರ ಸಂಭವಿಸಿದ ಭಾರಿ ಹಿಮಪಾತ ದುರಂತಕ್ಕೆ ಏಳು ಮಂದಿ ಬಲಿಯಾಗಿದ್ದು, ಐವರು ಗಾಯಗೊಂಡಿದ್ದಾರೆ ಹಾಗೂ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಸುಮಾರು 2.45ರ ವೇಳೆಗೆ ಪಾಸ್ ಮೂಲಕ ಸಂಚರಿಸುತ್ತಿದ್ದ ನಾಲ್ಕು ಪ್ರಯಾಣಿಕರ ವಾಹನಗಳು ಹಿಮಪಾತದಲ್ಲಿ ಸಿಲುಕಿಕೊಂಡವು. ಭಾರೀ ಪ್ರಮಾಣದ ಹಿಮವು ವಾಹನಗಳನ್ನು ಸಂಪೂರ್ಣವಾಗಿ ಹೂತುಹಾಕಿದ ಪರಿಣಾಮ ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿ, ಹಿಮದ ಅಡಿಯಲ್ಲಿ ಹೂತುಹೋಗಿದ್ದವರ ರಕ್ಷಣೆಮಾಡಲಾಯಿತು. ಕಾರ್ಯಾಚರಣೆಯಲ್ಲಿ ಏಳು ಮಂದಿಯ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಗಾಯಗೊಂಡ ಐವರನ್ನು ದ್ರಾಸ್‌ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದು, ಅವರು ದ್ರಾಸ್ ಭಾಗವನ್ನು ದಾಟಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.