ಕನಕಪುರ ನಗರದ ಅಮರನಾರಾಯಣ ಬ್ಲಾಕ್‌ನಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಗ್ಯಾಸ್ ಸೋರಿಕೆಯಾಗಿ ಈ ದುರ್ಘಟನೆ ಸಂಭವಿಸಿತ್ತು. ಅಡುಗೆ ಮಾಡುವ ವೇಳೆ ಅನಿಲ ಸೋರಿಕೆಯಿಂದ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಒಂದೇ ಕುಟುಂಬದ ಮೂವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಕನಕಪುರದಲ್ಲಿ ನಡೆದಿದೆ.ಮೃತರನ್ನು ಸಿದ್ದರಾಜು (55), ಚಂದ್ರಮ್ಮ (50) ಹಾಗೂ ಪ್ರಶಾಂತ್ (22) ಎಂದು ಗುರುತಿಸಲಾಗಿದೆ. ಕೂಡಲೇ ಗಾಯಗೊಂಡಿದ್ದ ಮೂವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೂವರೂ ಕೊನೆಯುಸಿರೆಳೆದಿದ್ದಾರೆ. ಈ ದುರ್ಘಟನೆ ಕನಕಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಂದೆ, ತಾಯಿ ಹಾಗೂ ಮಗನ ಅಕಾಲಿಕ ಸಾವಿನಿಂದ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ಥಳೀಯರು ಕಂಬನಿ ಮಿಡಿದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.
ಆಟೋ ನಿಲ್ಲಿಸೋ ವಿಚಾರಕ್ಕೆ ನಡೆದ ಜಗಳ - ಕೊಲೆಯಲ್ಲಿ ಅಂತ್ಯ!
ರಾಜಧಾನಿ ಬೆಂಗಳೂರಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನು ಕೊಲೆ ಮಾಡಲಾಗಿದೆ. ಆಟೋ ವಿಚಾರಕ್ಕೆ ನಡೆದ ಗಲಾಟೆಗೆ ಪ್ರಾಣವನ್ನು ತೆಗೆಯಲಾಗಿದೆ.ನಾಯಂಡಹಳ್ಳಿ ಬಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ಮನೆ ಬಳಿ ಆಟೋ ನಿಲ್ಲಿಸೋ ವಿಚಾರಕ್ಕೆ ಯುವಕರ ನಡುವೆ ನಡೆದ ಗಲಾಟೆ ಸ್ನೇಹಿತನ ಕೊಲೆಯಲ್ಲಿ ಅಂತ್ಯವಾಗಿದ್ದು, ಕೊಲೆಯಾದ ಯುವಕನನ್ನು ಗುಣ (28) ಎಂದು ಗುರುತಿಸಲಾಗಿದೆ.
ಗುಣ ಸ್ನೇಹಿತನಾಗಿದ್ದ ವಿನೋದ್ ಕೊಲೆ ಆರೋಪಿಯಾಗಿದ್ದಾನೆ. ಘಟನೆಯಲ್ಲಿ ಮತ್ತೊಬ್ಬ ಯುವಕ ವೇಲು ಎಂಬಾತನಿಗೆ ಗಾಯಗಳಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ..
2 ದಿನದ ಹಿಂದೆ ಮನೆ ಬಳಿ ಆಟೋ ನಿಲ್ಲಿಸುವ ವಿಚಾರಕ್ಕೆ ಮೂವರ ನಡುವೆ ಗಲಾಟೆಯಾಗಿತ್ತು. ಇದೇ ಕಾರಣಕ್ಕೆ ಬೈಕ್‌ನಲ್ಲಿ ಬರುತ್ತಿದ್ದ ವೇಲು ಮತ್ತು ಗುಣನನ್ನು ವಿನೋದ್ ಅಡ್ಡಗಟ್ಟಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರಿಗೂ ಚಾಕು ಇರಿದಿದ್ದನು. ಗುಣ ಸಾವನ್ನಪ್ಪಿದ್ದು, ಗಾಯಗೊಂಡ ವೇಲುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.ಆರೋಪಿ ವಿನೋದ್‌ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.