54ನೇ ವಯಸ್ಸಿನಲ್ಲಿಯೂ 20 ಕೆಜಿ ತೂಕ ಇಳಿಸಿ ಗಮನ ಸೆಳೆದಿರುವವರು ನಟಿ ಖುಷ್ಟೂ ಸುಂದರ್ ಇಂಜೆಕ್ಷನ್ ಬಳಸಿ ತೂಕ ಕಳೆದುಕೊಂಡರು ಎಂಬ ಟ್ರೋಲ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದರೂ, ತಮ್ಮ ಬದಲಾವಣೆಯ ಹಿಂದೆ ಕಠಿಣ ಪರಿಶ್ರಮವೇ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಕಾಲಘಟ್ಟವಾದ 2020ರಲ್ಲಿ ಅವರ ತೂಕ 93 ಕೆಜಿ ಇತ್ತು. ಅಂದಿನಿಂದ ಶಿಸ್ತುಬದ್ಧ ಜೀವನಶೈಲಿಯನ್ನು ಅಳವಡಿಸಿಕೊಂಡ ಅವರು ಯೋಗ, ಜಿಮ್ ವ್ಯಾಯಾಮ ಮತ್ತು ಕಟ್ಟುನಿಟ್ಟಿನ ಆಹಾರಕ್ರಮದ ಮೂಲಕ ತಮ್ಮ ದೇಹವನ್ನು ರೂಪಿಸಿಕೊಂಡಿದ್ದಾರೆ.
ಖ್ಯಾತ ನಿರ್ದೇಶಕ ಆನಂದ್ ಕುಮಾರ್ ಕೂಡ ಅವರ ಫಿಟ್ನಸ್ ಸಮರ್ಪಣೆಯನ್ನು ಶ್ಲಾಘಿಸಿದ್ದಾರೆ. ಪ್ರತಿದಿನ 10,000 ರಿಂದ 15,000 ಹೆಜ್ಜೆಗಳನ್ನು ನಡೆಯುವುದು ಅವರ ನಿತ್ಯದ ಅಭ್ಯಾಸ. ಪ್ರಯಾಣದಲ್ಲಿದ್ದರೂ ನಡೆಯುವುದನ್ನು ಅವರು ನಿರ್ಲಕ್ಷಿಸುವುದಿಲ್ಲ.
40 ವರ್ಷದ ನಂತರ ತೂಕ ಇಳಿಸುವುದು ಕಷ್ಟ ಎಂಬ ಭ್ರಮೆಯನ್ನು ಖುಷ್ಟೂ ತಳ್ಳಿ ಹಾಕುತ್ತಾರೆ. "ವಯಸ್ಸಾದಂತೆ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ ನಿಜ. ಆದರೆ ಅದು ನಿಲ್ಲುವುದಿಲ್ಲ. ದೈಹಿಕ ಚಟುವಟಿಕೆ ಕಡಿಮೆ ಮಾಡುವುದು ಮತ್ತು ಹಳೆಯ ಆಹಾರ ಪದ್ಧತಿಯನ್ನು ಬದಲಾಯಿಸದಿರುವುದೇ ತೂಕ ಹೆಚ್ಚಳಕ್ಕೆ ಕಾರಣ" ಎಂದು ಅವರು ಹೇಳಿದ್ದಾರೆ.
"ತೂಕ ಇಳಿಸಲು ಕೇವಲ ನಡೆಯುವುದು ಅಥವಾ ಓಡುವುದು ಸಾಕಾಗುವುದಿಲ್ಲ. ಸ್ನಾಯುಗಳ ಬಲ ಹೆಚ್ಚಿಸುವ ವ್ಯಾಯಾಮವೂ ಅಗತ್ಯ. ಸ್ನಾಯುಗಳು ಬಲವಾಗಿದ್ದಷ್ಟು ಕ್ಯಾಲೊರಿಗಳು ವೇಗವಾಗಿ ಬರ್ನ್ ಆಗುತ್ತವೆ" ಎಂದು ಅವರು ಸಲಹೆ ನೀಡಿದ್ದಾರೆ.ಋತುಚಕ್ರದ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳಿಂದ ತೂಕ ಹೆಚ್ಚಾಗುವುದು ಸಹಜ ಎಂದು ಹೇಳುವ ಅವರು, ಒತ್ತಡ ಕಡಿಮೆ ಮಾಡುವುದು, ಸರಿಯಾದ ನಿದ್ರೆ ಹಾಗೂ ಪೌಷ್ಟಿಕ ಆಹಾರ ಸೇವನೆಯ ಮೂಲಕ ಇದನ್ನು ನಿಯಂತ್ರಿಸಬಹುದು ಎಂದು ಹೇಳಿದ್ದಾರೆ.
54ರ ವಯಸ್ಸಿನಲ್ಲಿ ಸಾಧಿಸಿದ ಈ ಬದಲಾವಣೆ ಅನೇಕರಿಗೆ ಮಾದರಿಯಾಗಿದೆ. ಸರಿಯಾದ ಮನೋಭಾವ ಮತ್ತು ನಿರಂತರ ಪ್ರಯತ್ನದಿಂದ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಖುಷ್ಟೂ ಸುಂದರ್ ಜೀವಂತ ಉದಾಹರಣೆ.