ಚಿಕ್ಕಮಗಳೂರು: ಜಿಲ್ಲೆಯ ಹೋಂಸ್ಟೇಯೊಂದರಲ್ಲಿ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 4 ತಿಂಗಳ ಬಳಿಕ ಇದೀಗ ಮಾಲೀಕನ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಯುವತಿ ರಂಜಿತಾ 2025 ರ ಅಕ್ಟೋಬರ್ 25ರಂದು ಸ್ನೇಹಿತೆಯ ನಿಶ್ಚಿತಾರ್ಥಕ್ಕೆ ಬಂದಿದ್ದಳು. ಅದೇ ದಿನ ಹೋಂ ಸ್ಟೇ ಬಾತ್‌ರೂಮ್‌ನಲ್ಲಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು. ಬಳಿಕ ಆಕೆಯ ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ಸತ್ಯಾಂಶ ಬಹಿರಂಗವಾಗಿದೆ.
ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮೋನಾಕ್ಸೆಡ್ ಅನಿಲ ಸೋರಿಕೆಯಿಂದ ಸಾವು ದೃಢಪಟ್ಟಿದೆ. ಈ ಹಿನ್ನೆಲೆ ಸರಿಯಾದ ವೆಂಟಿಲೇಶನ್ ವ್ಯವಸ್ಥೆ ಇಲ್ಲದಿದ್ದದ್ದೇ ದುರಂತಕ್ಕೆ ಕಾರಣ ಎಂದು ಹೋಂ ಸ್ಟೇ ಮಾಲೀಕ ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.ಹೋಂ ಸ್ಟೇ ಮಾಲೀಕರ ನಿರ್ಲಕ್ಷ್ಯವೇ ಯುವತಿಯ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಆಲೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಟ್ರಾಲಿ ಕಟ್ ಆಗಿ ಟ್ರಾಕ್ಟರ್ ಪಲ್ಟಿ: ಕೂಲಿ ಕಾರ್ಮಿಕರು ತೆರಳುತ್ತಿದ್ದ ಟ್ರ್ಯಾಕ್ಟರ್‌ನ ಟ್ರಾಲಿ ಕಟ್ ಆಗಿ ಪಲ್ಟಿಯಾಗಿ 2 ವರ್ಷದ ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕಟ್ಟೆ ಕೆರೆ ಬಳಿ ನಡೆದಿದೆ. ನಸುಕಿನ ಜಾವ 2 ಗಂಟೆ ವೇಳೆ ಘಟನೆ ನಡೆದಿದೆ. ಮೃತರನ್ನು ಮನೀಷ್ ಪಾಂಡೆ (23), ಹಲಕಿ ಪಾಂಡೆ (2), ಲಕ್ಷ್ಮಿ ಚಿರಮಡಿ (27) ಮತ್ತು ರೇಖಾ ಭೂಕೆ (28) ಎಂದು ಗುರುತಿಸಲಾಗಿದೆ.
ಮೃತರು ಮಹಾರಾಷ್ಟ್ರ ರಾಜ್ಯದ ಯುವತ್ಮಾಳ್ ಜಿಲ್ಲೆ ಬೂಸಾ ತಾಲೂಕಿನ ಗುಪವಾಡಿ ನಿವಾಸಿಗಳು ಎನ್ನಲಾಗಿದೆ. ಸ್ಥಳಕ್ಕೆ ಜಮಖಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಘಟನೆ ಬಗ್ಗೆ ಎಸ್ಸಿ ಸಿದ್ಧಾರ್ಥ ಗೋಯಲ್ ಪ್ರತಿಕ್ರಿಯಿಸಿ, ಇಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಅಪಘಾತವಾಗಿದೆ. ಮಹಾರಾಷ್ಟ್ರದಿಂದ ಕಬ್ಬು ಕಟಾವು ಮಾಡಲು ಬಂದಿದ್ದ ಕೂಲಿ ಕಾರ್ಮಿಕರು ಪ್ರಯಾಣ ಮಾಡುತ್ತಿದ್ದ ವಾಹನ ಇದಾಗಿದೆ. ಜೋಡಿ ಟ್ರಾಲಿಗಳು ಟ್ರಾಕ್ಟರ್ ಇಂಜಿನ್‌ನಿಂದ ಕಟ್ ಆಗಿ ಪಲ್ಟಿಯಾಗಿ ಅವಘಡ ಸಂಭವಿಸಿದೆ. ಒಂದು ಟ್ರಾಲಿ ಮೇಲೆ ಮತ್ತೊಂದು ಟ್ರಾಲಿ ಮಗುಚಿ ಬಿದ್ದ ಕಾರಣ ಅವಘಡವಾಗಿದೆ ಎಂದರು.