ಬೆಂಗಳೂರು: ಜಾರ್ಖಂಡ್‌ನಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರಗಳನ್ನು ಬಳಸಲಾಗಿದ್ದರೂ ಬಿಜೆಪಿ ಮೇಲುಗೈ ಸಾಧಿಸಿರುವುದು ಅಚ್ಚರಿ ಮೂಡಿಸಿದೆ.ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಬ್ಯಾಲೆಟ್ ಬದಲಿಗೆ ಮತಯಂತ್ರಗಳನ್ನು (ಇವಿಎಂ) ಬಳಸಲಾಗುತ್ತದೆಯೇ ಎಂಬ ಶಂಕೆ ಮೂಡಿದೆ.
ಇವಿಎಂ ಗಳ ಬಗ್ಗೆ ಕಾಂಗ್ರೆಸ್ ಸಂಶಯ ವ್ಯಕ್ತಪಡಿಸಿತ್ತು. ಇವಿಎಂ ಗಳನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿತ್ತು.ಹಾಗಾಗಿ ಮುಂಬರುವ ಜಿಬಿಎ, ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲು ರಾಜ್ಯ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿತ್ತು.
ಹೀಗಾಗಿಯೇ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕ 2025ಕ್ಕೆ ತಿದ್ದುಪಡಿ ಮಾಡಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್‌ನಲ್ಲಿ ಚುನಾವಣೆ ನಡೆಸಲು ಆಯೋಗಕ್ಕೂ ಸೂಚನೆ ನೀಡಲಾಗಿದೆ.
ಇದೇ ಮಾದರಿಯಲ್ಲಿ ಜಾರ್ಖಂಡ್ ನಲ್ಲಿ ಅಧಿಕಾರದಲ್ಲಿರುವ ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಪರಿಚಯಿಸಿತ್ತು. ಇಂಡಿಯಾ ಮೈತ್ರಿಕೂಟವನ್ನು ಹಿಂದಿಕ್ಕಿ ಜಾರ್ಖಂಡ್‌ನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಸಾಧಿಸಿದೆ.
ಒಂದು ಹಂತದಲ್ಲಿ ಇವಿಎಂ ಬಳಕೆ ಕುರಿತು ಇದ್ದ ಸಂಶಯ ನಿವಾರಣೆಯಾದಂತಾಗಿದೆ. ಹಾಗಾಗಿ ಸರ್ಕಾರ ಮರುಚಿಂತನೆ ನಡೆಸಲಿದೆಯೇ ಎಂಬ ಅನುಮಾನ ಕಾಡುತ್ತಿದೆ.