ಬೆಂಗಳೂರು: ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬ ತನ್ನ ಪೋಷಕರನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನೌಕಾದಳದ ನಿವೃತ ಕ್ಯಾಪ್ಟನ್ ನವೀನ್ ಚಂದ್ರ ಭಟ್ (61) ಹಾಗೂ ದಂತವೈದ್ಯೆ ಹತ್ಯೆಗೀಡಾದ ದುರ್ದೈವಿಗಳು. 33 ವರ್ಷದ ರೋಹನ್ ಚಂದ್ರ ಭಟ್ ಕೊಲೆ ಮಾಡಿದ ಪುತ್ರ. ಕೊಲೆಗೆ ಕಾರಣ ತಿಳಿದು ಬಂದಿಲ್ಲ.
ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಜ್ಞಾನ ನಗರದ ಅದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನ ವಿಲ್ಲಾದಲ್ಲಿ ಮೂವರೂ ವಾಸವಾಗಿದ್ದರು ತಂದೆ, ತಾಯಿ ಇಬ್ಬರನ್ನೂ ರೋಹನ್ ಭಟ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇವರ ನೆರೆಹೊರೆಯವರೊಬ್ಬರು ನೀಡಿದ ದೂರಿನ ಮೇರೆಗೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವೃತ್ತಿಯಿಂದ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ರೋಹನ್ ಭಟ್ ಇತ್ತೀಚೆಗೆ ಕೆಲಸ ಬಿಟ್ಟಿದ್ದ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಕೌಟುಂಬಿಕ ಕಾರಣಕ್ಕೆ ಹತ್ಯೆ ಮಾಡಿದ್ದಾಗಿ ಆರೋಪಿ ಹೇಳುತ್ತಿದ್ದಾನೆ. ಆದರೂ ನಿಖರ ಕಾರಣವನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಚಾಕು ಹಿಡಿದು ಓಡಾಟ ನಡೆಸಿದ್ದನ್ನು ಅಲ್ಲಿನ ನಿವಾಸಿಗಳು ಗಮನಿಸಿದ್ದಾರೆ. ನವೀನ್ ಹಾಗೂ ಶ್ಯಾಮಲಾ ಇಬ್ಬರೂ ವಿಲ್ಲಾದಿಂದ ಹೊರಗೆ ಬಂದಿರಲಿಲ್ಲ. ಅನುಮಾನಗೊಂಡ ಕೆಲವರು ಹೋಗಿ ನೋಡಿದಾಗ ಕೊಲೆ ಆಗಿರುವುದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಇವರ ಪುತ್ರಿ ರಶ್ಮಿ ಅಮೆರಿಕದಲ್ಲಿಉದ್ಯೋಗಿಯಾಗಿದ್ದು, ಅವರು ಬಂದ ನಂತರ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.