ತಮಿಳುನಾಡು ಚುನಾವಣಾ ಕಣದಲ್ಲಿ ಆರೋಪ-ಪ್ರತ್ಯಾರೋಪಗಳ ಪರ್ವ ಜೋರಾಗಿದೆ. ಕೃಷ್ಣಗಿರಿ ಮತ್ತು ಧರ್ಮಪುರಿಯಲ್ಲಿ ಮಿಂಚಿನ ಸಂಚಾರ ನಡೆಸಿದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ, ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಚುನಾವಣಾ ಪ್ರಚಾರ ಉದ್ದೇಶಿಸಿ ಮಾತನಾಡಿದ ಪಳನಿಸ್ವಾಮಿ, ಡಿಎಂಕೆ ಮೈತ್ರಿಕೂಟದ ಒಳಜಗಳವನ್ನು ಬೀದಿಗೆ ತಂದಿದ್ದಾರೆ. ಸೀಟು ಹಂಚಿಕೆಯ ಗೊಂದಲದಿಂದಾಗಿ ವಿಸಿಕೆ ನಾಯಕ ತಿರುಮಾವಳವನ್ ಅಸಮಾಧಾನಗೊಂಡಿದ್ದಾರೆ. ಡಿಎಂಕೆ ಮೈತ್ರಿಕೂಟದಲ್ಲಿರುವ ಎಲ್ಲಾ ನಾಯಕರು ಅತೃಪ್ತಿಯಿಂದ ಅಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಎಐಎಡಿಎಂಕೆಯನ್ನು ಬಿಜೆಪಿಯ ಗುಲಾಮ ಎಂದು ಕರೆಯುವ ಸ್ಟಾಲಿನ್ ಅವರಿಗೆ, ಡಿಎಂಕೆ ಹಲವು ವರ್ಷಗಳಿಂದ ಕಾಂಗ್ರೆಸ್‌ನ ಗುಲಾಮನಾಗಿರುವುದು ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದರು. ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಎ. ರಾಜಾ ಅವರದ್ದು ಎನ್ನಲಾದ ಆಡಿಯೋ ಬಗ್ಗೆ ಮಾತನಾಡಿದ ಅವರು, 2ಜಿ ಹಗರಣದ ವೇಳೆ ಕನಿಮೋಳಿ ಅವರನ್ನು ರಕ್ಷಿಸಿದ ಡಿಎಂಕೆ, ರಾಜಾ ಅವರನ್ನು ಕೈಬಿಟ್ಟಿತ್ತು ಎಂಬುದು ಈಗ ಸಾಬೀತಾಗಿದೆ. ಸ್ಟಾಲಿನ್ ಅಧಿಕಾರಕ್ಕೆ ಬಂದರೆ ತಮಿಳುನಾಡು ಜನರನ್ನು ಕೈದಿಗಳಂತೆ ನಡೆಸಿಕೊಳ್ಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅಂಕಿಅಂಶ ಸಮೇತ ಇಪಿಎಸ್ ವಾಗ್ದಾಳಿ ನಡೆಸಿದರು. ಸರ್ಕಾರಿ ದತ್ತಾಂಶದ ಪ್ರಕಾರ 26 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೂ, ಸ್ಟಾಲಿನ್ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಸರ್ಕಾರ ಇನ್ನೂ ಪತ್ತೆ ಮಾಡಿಲ್ಲ ಏಕೆ? ಎಂದು ಅವರು ಪ್ರಶ್ನಿಸಿದರು. ಧರ್ಮಪುರಿ ಜಿಲ್ಲೆಯು ಎಐಎಡಿಎಂಕೆಯ ಕೋಟೆಯಾಗಿದ್ದು, ತಮಿಳರ ಹಕ್ಕುಗಳಿಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸುವ ಮೂಲಕ ಪಳನಿಸ್ವಾಮಿ ಮತದಾರರ ಸೆಳೆಯುವ ಪ್ರಯತ್ನ ಮಾಡಿದರು.