2026-03-07 05:28:23

Dr M Chidanandamurthy who dedicated his life to land | ನೆಲ ಜಲ ಭಾಷೆಗಾಗಿ ಪ್ರಾಣವನ್ನೇ ಮುಡುಪಿಟ್ಟ ಬರಹಗಾರ ಡಾ ಎಂ ಚಿದಾನಂದಮೂರ್ತಿ ಹಂಪನಾ | Speed News Kannada

Dr M Chidanandamurthy who dedicated his life to land | ನೆಲ ಜಲ ಭಾಷೆಗಾಗಿ ಪ್ರಾಣವನ್ನೇ ಮುಡುಪಿಟ್ಟ ಬರಹಗಾರ  ಡಾ ಎಂ ಚಿದಾನಂದಮೂರ್ತಿ ಹಂಪನಾ | Speed News Kannada

ಬೆಂಗಳೂರು: ಕನ್ನಡ ನೆಲ-ಜಲ-ಭಾಷೆಯ ವಿಚಾರಕ್ಕಾಗಿ ತಮ್ಮ ಪ್ರಾಣವನ್ನೇ ಮುಡುಪಿಟ್ಟ ಅಪರೂಪದ ಬರಹಗಾರ ಡಾ. ಎಂ. ಚಿದಾನಂದಮೂರ್ತಿ. ಅವರು ಕನ್ನಡ ಸಾಹಿತ್ಯ, ಸಂಶೋಧನೆ ಮತ್ತು ವೈಚಾರಿಕತೆಗೆ ಕೊಟ್ಟ ಕೊಡುಗೆ ಅನನ್ಯವಾದದ್ದು ಎಂದು ಹಿರಿಯ ಸಾಹಿತಿ ನಾಡೋಜ ಡಾ. ಹಂಪ ನಾಗರಾಜಯ್ಯ ಹೇಳಿದ್ದಾರೆ. 
ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಆಯೋಜಿಸಿದ್ದ “ಡಾ. ಎಂ. ಚಿದಾನಂದಮೂರ್ತಿಯವರ ಸಮಗ್ರ ಸಾಹಿತ್ಯ ಸಂಪುಟಗಳು ಹಾಗೂ ವಿವಿಧ ಮರು ಮುದ್ರಣ ಕೃತಿಗಳ ಲೋಕಾರ್ಪಣೆ” ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು. 
ಚಿದಾನಂದಮೂರ್ತಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆಯನ್ನು ಒಂದು ಹಿಡಿತದಲ್ಲಿ ಅಳತೆ ಮಾಡಲಾಗದು. ಸೃಜನಶೀಲ, ಸೃಜನೇತರ ಬರಹಗಳ ಜೊತೆಜೊತೆಗೆ ಅವರ ಸಂಶೋಧನಾಶೀಲ ವಿಚಾರ ವೈಖರಿಯು ನಮ್ಮನ್ನು ಅಚ್ಚರಿಗೊಳಿಸುತ್ತದೆ. ಅವರ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಕೃತಿ ಸಂಶೋಧಕರ ಪಾಲಿಗೆ ಭಗವದ್ಗೀತೆಯಾಗಿದೆ. ಚಿದಾನಂದಮೂರ್ತಿಗಳಿಗೆ ಗುರುಪರಂಪರೆಯಲ್ಲಿರುವ ರೀತಿಯ ಪ್ರಾಮಾಣಿಕತೆ, ನಿಷ್ಠೆ ಇದೆ. ಅವರ ಅಧ್ಯಯನದ ಹರವು, ಹಾಸು, ಮಹತ್ವ ಬಹಳದೊಡ್ಡದು. ಅವರ ಸಾಹಿತ್ಯದ ವಿಸ್ತಾರ ಮತ್ತು ಶಾಸ್ತ್ರೀಯ ಅಧ್ಯಯನ ಮಾಡುವ ಅವಶ್ಯಕತೆ ಹಿಂದೆಂದಿಗಿಂತ ಅಧಿಕವಾಗಿದೆ ಎಂದು ಅವರು ಹೇಳಿದರು. 
ಕೃತಿಯ ಸಂಪಾದಕರ ಡಾ. ಬಸವರಾಜ ಕಲ್ಗುಡಿ ಅವರು ಮಾತನಾಡಿ ಡಾ. ಎಂ. ಚಿದಾನಂದಮೂರ್ತಿ ಅವರು ಬಹುಮುಖಿ ಸಂವೇದನೆ ಮತ್ತು ಬಹುಮುಖಿ ಚಿಂತನೆಯುಳ್ಳ ಅಪರೂಪದ ವ್ಯಕ್ತಿ ಅವರು ಬರೆದ ಸಾಹಿತ್ಯದ ಪ್ರಮಾಣ ಬಹಳ ದೊಡ್ಡದು ಈಗ ನಾವು 15 ಸಂಪುಟಗಳಲ್ಲಿ ಅವರ ಕೃತಿಗಳನ್ನು ವಿಂಗಡಿಸಿದ್ದೇವೆ. ಪ್ರಾಧಿಕಾರ ಈ ಸಮಗ್ರ ಸಾಹಿತ್ಯವನ್ನು ಪ್ರಕಟಿಸುವ ಮೂಲಕ ಡಾ. ಚಿದಾನಂದಮೂರ್ತಿಯವನ್ನು ಗೌರವಿಸುವ ಪ್ರಶಂಸನೀಯ ಕೆಲಸ ಮಾಡಿದೆ ಎಂದು ಹೇಳಿದರು. 
 ಬೆಂಗಳೂರಿನ ಚರ್ಚ್ಗಳಲ್ಲಿ ಕನ್ನಡ ಪ್ರಾರ್ಥನೆ ಮೊಳಗುವಂತೆ ಮಾಡಿದ ಕೀರ್ತಿ ಚಿದಾನಂದಮೂರ್ತಿ ಅವರಿಗೆ ಸಲ್ಲುತ್ತದೆ ಎಂದು ಕಲ್ಗುಡಿ ಹೇಳಿದರು. 
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಾ. ಎಂ. ಚಿದಾನಂದಮೂರ್ತಿಗಳ ಮಗ ವಿನಯ್   ಚಿದಾನಂದಮೂರ್ತಿ ನಾಡು-ನುಡಿಯ ವಿಷಯ ಬಂದಾಗ ನಮ್ಮ ತಂದೆ ಯಾವುದಕ್ಕೂ ಹೆದರುತ್ತಿರಲಿಲ್ಲ. ಅವರಿಗೆ ಜೀವ ಬೆದರಿಕೆ ಬಂದಾಗಲೂ ಪ್ರಾಣ ಭಯ ತೊರೆದು ಕನ್ನಡ ನೆಲ-ಜಲ-ಭಾಷೆಗಾಗಿ ಹೋರಾಡಿದರು  ಎಂದರು. 
ಡಾ. ಸಿ.ಆರ್. ಚಂದ್ರಶೇಖರ ಅವರು ಮಾತನಾಡಿ ಇಂದಿನ ಯುವಪೀಳಿಗೆ ಸಾಧ್ಯವಾದಷ್ಟು ಪಾಸಿಟೀವ್ ಮನೋಭಾವನೆ ಬೆಳೆಸಿಕೊಳ್ಳಬೇಕು. ಅದಕ್ಕೆ ಬೇಕಾದದ್ದು ಸಾಹಿತ್ಯಾಸಕ್ತಿ. ಒಳ್ಳೆಯ ಸಾಹಿತ್ಯವನ್ನು ಓದಿ, ಒಳ್ಳೆಯ ಚಿಂತನೆ ಮಾಡುವುದನ್ನು ಇಂದಿನ ಯುವಜನತೆ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. 
ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಮಾನಸ ಹೊಸಗನ್ನಡ ಅರುಣೋದಯ ಕೃತಿ ಲೇಖಕಿ ನಿವೇದಿತ ಹೊನ್ನತ್ತಿ, ಟಿ.ಎಸ್. ವೆಂಕಣ್ಣಯ್ಯ ಅವರ ಮಗ ಟಿ.ಎಸ್. ಶ್ರೀಕಂಠಯ್ಯ ಭಾಗವಹಿಸಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.