2026-04-24 01:38:55

Development works in India stalled amid Iran-Israel war|ಇರಾನ್-ಇಸ್ರೇಲ್ ಯುದ್ಧದ ಬಿಸಿ ಭಾರತದ ಅಭಿವೃದ್ಧಿ ಕಾಮಗಾರಿಗಳು ಸ್ತಬ್ಧ|Speed News Kannada

Development works in India stalled amid Iran-Israel war|ಇರಾನ್-ಇಸ್ರೇಲ್ ಯುದ್ಧದ ಬಿಸಿ ಭಾರತದ ಅಭಿವೃದ್ಧಿ ಕಾಮಗಾರಿಗಳು ಸ್ತಬ್ಧ|Speed News Kannada

ಇರಾನ್ - ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡ ಈಗ ಭಾರತದ ಆರ್ಥಿಕತೆಯ ಮೇಲೆ ಕವಿಯುತ್ತಿದೆ. ಹೊರ್ಮುಜ್ ಜಲಸಂಧಿಯ ಮಾರ್ಗ ಬಂದ್ ಆಗಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಅಗತ್ಯ ವಸ್ತುಗಳ ಕೊರತೆ ಶುರುವಾಗಿದ್ದು, ಪ್ರಮುಖವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಭಾರಿ ಹೊಡೆತ ಬಿದ್ದಿದೆ. ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸತತ ಸಂಘರ್ಷದಿಂದಾಗಿ ಕಾರವಾರದ ವಾಣಿಜ್ಯ ಬಂದರು ಇಂದು ಚಟುವಟಿಕೆಗಳಿಲ್ಲದೆ ಮೌನವಾಗಿದೆ. ಇರಾಕ್ ಮತ್ತು ಯುಎಇ ರಾಷ್ಟ್ರಗಳಿಂದ ಬರಬೇಕಿದ್ದ ಕಚ್ಚಾ ಡಾಂಬರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಮಾರ್ಚ್ ಮಧ್ಯಭಾಗದಿಂದ ಈವರೆಗೆ ಯಾವುದೇ ಹಡಗು ಬಂದರಿಗೆ ತಲುಪಿಲ್ಲ.

ಇದರ ನೇರ ಪರಿಣಾಮ ಈಗ ರಸ್ತೆ ಕಾಮಗಾರಿಗಳ ಮೇಲೆ ಬೀರುತ್ತಿದೆ. ಡಿಸೆಂಬರ್‌ನಿಂದ ಏಪ್ರಿಲ್‌ವರೆಗೆ ರಸ್ತೆ ಕೆಲಸಗಳಿಗೆ ಪ್ರಶಸ್ತ ಕಾಲ. ಆದರೆ, ಈ ಹಿಂದೆ 40 ರಿಂದ 45 ಸಾವಿರ ರೂಪಾಯಿ ಇದ್ದ ಒಂದು ಟನ್ ಡಾಂಬರು ಬೆಲೆ ಈಗ 60 ರಿಂದ 65 ಸಾವಿರ ರೂಪಾಯಿಗೆ ಜಿಗಿದಿದೆ. ಗುತ್ತಿಗೆದಾರರು ಹೆಚ್ಚಿನ ಹಣ ನೀಡಲು ಸಿದ್ಧರಿದ್ದರೂ ಮಾರುಕಟ್ಟೆಯಲ್ಲಿ ಡಾಂಬರು ಲಭ್ಯವಿಲ್ಲದೆ ಕಾಮಗಾರಿಗಳು ಸ್ಥಗಿತಗೊಂಡಿವೆ. ಮತ್ತೊಂದೆಡೆ, ಎಲ್‌ಪಿಜಿ ಅನಿಲದ ಕೊರತೆಯೂ ತೀವ್ರವಾಗಿದೆ. ಗ್ಯಾಸ್ ಸಿಗದೆ ಹೋಟೆಲ್ ಉದ್ಯಮಿಗಳು ಮತ್ತೆ ಹಳೆಯ ಕಾಲದ ಸೌದೆ ಒಲೆಗಳ ಮೊರೆ ಹೋಗುತ್ತಿದ್ದರೆ, ಆಟೋ ಚಾಲಕರು ಇಂಧನಕ್ಕಾಗಿ ಪರದಾಡುವಂತಾಗಿದೆ. ಒಟ್ಟಾರೆ, ದೂರದ ಗಲ್ಫ್ ರಾಷ್ಟ್ರಗಳ ಯುದ್ಧವು ನಮ್ಮೂರಿನ ರಸ್ತೆ ಮತ್ತು ಅಡುಗೆ ಮನೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.