ಲಕ್ಕೆ: ಹಲವಾರು ಮಕ್ಕಳ ಮೇಲೆ ನಡೆಸಿದ ಕ್ರೂರ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಸಂಬಂಧ ಉತ್ತರ ಪ್ರದೇಶದ ದಂಪತಿಗೆ ಬಾಂದಾದಲ್ಲಿರುವ ವಿಶೇಷ ಪೋಕೋ (POCSO) ನ್ಯಾಯಾಲಯವು ಮರಣದಂಡನೆ ವಿಧಿಸಿದೆ. ರಾಮ್ ಭವನ್ ಮತ್ತು ದುರ್ಗಾವತಿ ಅವರಿಗೆ ಸಂಬಂಧಿಸಿದ ಈ ಪ್ರಕರಣವು 'ಅಪರೂಪದಲ್ಲಿಯೇ ಅತಿ ಅಪರೂಪದ' ಪ್ರಕರಣವೆಂದು ಪರಿಗಣಿಸಿ ಕೋರ್ಟ್ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯನ್ನು ಪ್ರಕಟಿಸಿದೆ.
ಮೂರು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 33 ಮಕ್ಕಳು ಈ ದಂಪತಿಯಿಂದ ಕ್ರೂರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು. ಆರೋಪಿಗಳ ಈ ಕ್ರೌರ್ಯಕ್ಕೆ ಬಲಿಯಾದ ಪ್ರತಿ ಮಗುವಿನ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು ಎಂದು ನ್ಯಾಯಾಲಯದ ಆದೇಶವು ತಿಳಿಸಿದೆ.
ತನಿಖಾ ತಂಡವು ಲೈಂಗಿಕ ದೌರ್ಜನ್ಯ, ಗಂಭೀರ ಸ್ವರೂಪದ ಲೈಂಗಿಕ ದೌರ್ಜನ್ಯ (Aggravated Sexual Assault), 2) (Child Pornography) ಮತ್ತು ಕ್ರಿಮಿನಲ್ ಪಿತೂರಿಯಂತಹ ಗಂಭೀರ ಆರೋಪಗಳನ್ನು ದಾಖಲಿಸಿದೆ.ನೀರಾವರಿ ಇಲಾಖೆಯಲ್ಲಿ ಜೂನಿಯರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ರಾಮ್ ಭವನ್, ಆನ್‌ಲೈನ್ ವಿಡಿಯೋ ಗೇಮ್ ಗಳು, ಹಣ ಮತ್ತು ಉಡುಗೊರೆಗಳ ಆಮಿಷ ತೋರಿಸಿ ಮಕ್ಕಳನ್ನು ಸೆಳೆಯುತ್ತಿದ್ದನು. ಇವರ ಈ ಕ್ರೂರ ಕೃತ್ಯಗಳು 2010 ಮತ್ತು 2020ರ ನಡುವೆ ಉತ್ತರ ಪ್ರದೇಶದ ಬಾಂದಾ ಮತ್ತು ಚಿತ್ರಕೂಟದಲ್ಲಿ ನಡೆದಿದ್ದವು. ಅಕ್ಟೋಬರ್ 2020ರಲ್ಲಿ ಸಿಬಿಐ ಈ ದೌರ್ಜನ್ಯಗಳ ಬಗ್ಗೆ ಪ್ರಕರಣ ದಾಖಲಿಸಿಕೊಂಡಿತ್ತು. 2021ರ ಫೆಬ್ರವರಿಯಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಲಾಯಿತು. ಸಿಬಿಐ ತನಿಖೆಯು ಆರೋಪಿಗಳ ಕ್ರೌರ್ಯದ ಬಗ್ಗೆ ಬೆಚ್ಚಿಬೀಳಿಸುವ ವಿವರಗಳನ್ನು ಬಹಿರಂಗಪಡಿಸಿದೆ.ವರದಿಗಳ ಪ್ರಕಾರ, ಅನೇಕ ಮಕ್ಕಳು ತಮ್ಮ ಗುಪ್ತಾಂಗಗಳಿಗೆ ಗಂಭೀರವಾದ ಗಾಯಗಳನ್ನು ಅನುಭವಿಸಿದ್ದಾರೆ. ಕೆಲವರು ಕಣ್ಣಿನ ಗಾಯಗಳಿಗೂ ತುತ್ತಾಗಿದ್ದಾರೆ. ಇನ್ನೂ ಕೆಲವು ಮಕ್ಕಳು ವರ್ಷಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಈ ಭೀಕರ ದೌರ್ಜನ್ಯಗಳ ನಂತರ ಹೆಚ್ಚಿನ ಮಕ್ಕಳು ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿದ್ದಾರೆ.