2026-03-07 05:17:17

Congress government has increased the prices of more than 50 items | ರಾಜ್ಯ ಕಾಂಗ್ರೆಸ್ ಸರ್ಕಾರ 50ಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಸಿದೆ ಪ್ರಹ್ಲಾದ ಜೋಶಿ ತರಾಟೆ | Speed News kannada

Congress government has increased the prices of more than 50 items | ರಾಜ್ಯ ಕಾಂಗ್ರೆಸ್ ಸರ್ಕಾರ 50ಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಸಿದೆ ಪ್ರಹ್ಲಾದ ಜೋಶಿ ತರಾಟೆ | Speed News kannada

ಹುಬ್ಬಳ್ಳಿ: ದುರಾಡಳಿತ, ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ 50ಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಕೆ ಮಾಡಿ ದಾಖಲೆ ಬರೆದಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹರಿ ಹಾಯ್ದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪೆಟ್ರೋಲ್, ಡಿಸೇಲ್, ವಿದ್ಯುತ್, ಆಸ್ತಿ ನೋಂದಣಿ ಶುಲ್ಕ ಸೇರಿದಂತೆ  50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನಸಾಮಾನ್ಯರನ್ನು ಹಿಂಸಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ರಾಜ್ಯದಲ್ಲಿ ಗೃಹೋಪಯೋಗಿ, ಕೈಗಾರಿಕೆ ಹಾಗೂ ವಾಣಿಜ್ಯೋಪಯೋಗಿ ವಿದ್ಯುತ್ ದರ ಹೆಚ್ಚಿಸಲು ತಯಾರಿ ನಡೆದಿದೆ. ಇದು ಸರ್ಕಾರದ ಕೈಗಾರಿಕಾ ವಿರೋಧಿ ನೀತಿಯನ್ನು ನಿರೂಪಿಸುತ್ತದೆ. ಈ ಕ್ರಮದಿಂದಾಗಿ ಬೃಹತ್ ಉದ್ಯಮಗಳು ರಾಜ್ಯಕ್ಕೆ ಬರಲು ಹಿಂದಡಿ ಇಡುತ್ತಿವೆ. ಈಗಾಗಲೇ ಗೂಗಲ್ ಕಂಪನಿ ರಾಜ್ಯದಿಂದ ಹೊರ ಹೋಗಿದೆ ಎಂದರು.
ಆರ್ಥಿಕ ದುರ್ಬಲದಲ್ಲಿ ರಾಜ್ಯ: ಆರ್ಥಿಕ ಸಂಪದ್ಭರಿತವಾಗಿದ್ದ ಕರ್ನಾಟಕವನ್ನು ವಿತ್ತೀಯ ದುಸ್ಥಿತಿಯತ್ತ ತಳ್ಳಿದೆ. ರಾಜ್ಯ ಸರ್ಕಾರ ₹,8.4 ಲಕ್ಷ ಕೋಟಿ ಸಾಲ ಮಾಡಿಕೊಂಡಿದೆ. ಸಾಲವಿರಲಿ ಅದರ ಬಡ್ಡಿ ಕಟ್ಟಲೂ ದುಡ್ಡಿಲ್ಲ. ಈ ಸರ್ಕಾರದಲ್ಲಿ ವಿತ್ತೀಯ ಶಿಸ್ತೆಂಬುದೇ ಇಲ್ಲವಾಗಿದೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರದ ಸಚಿವರು ಭಾರತದ ಜಿಡಿಪಿ ಬಗ್ಗೆ ಮಾತನಾಡುತ್ತಾರೆ. ಮೊದಲು ಇವರು ರಾಜ್ಯದ ಜಿಡಿಪಿ ಏನಾಗಿದೆ ಎಂಬುದನ್ನು ನೋಡಿಕೊಳ್ಳಲಿ. ಈ ಬಾರಿ ಶೇ. 27.5 ರಷ್ಟು ಸಾಲದ ಪ್ರಮಾಣ ಹೆಚ್ಚಬಹುದು. ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯವನ್ನು ಅತ್ಯಂತ ಗಂಭೀರ ಪರಿಸ್ಥಿತಿಗೆ ತಲುಪಿಸಿದ್ದಾರೆ ಎಂದು ಜೋಶಿ ತಿರುಗೇಟು ನೀಡಿದರು.
ಹಾಲು-ಜೇನು ಹೇಳಿಕೆ ಹಾಸ್ಯಾಸ್ಪದ:
"ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ತಾವು ಹಾಲು-ಜೇನು ಇದ್ದಂತೆ" ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ನಿಜಕ್ಕೂ ಹಾಸ್ಯಾಸ್ಪದ. ಅವರದ್ದು ಹಾಲು-ಜೇನು ಅಲ್ಲ; ಬಹುಶಃ ಆಲ್ಕೋಹಾಲ್‌ ನಿಂಬೆಹಣ್ಣಿನಂತಹ ಸಂಬಂಧ ಇರಬೇಕು ಎಂದು ವ್ಯಂಗ್ಯವಾಡಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.