ಕರ್ನಾಟಕದ ಆರ್ಥಿಕ ಸ್ಥಿತಿಯನ್ನು ಕುರಿತು ರಾಜಕೀಯ ವಾಗ್ವಾದ ತೀವ್ರಗೊಂಡಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಬೇಕೆಂದು ಬಿ ವೈ ವೀಜಯೇಂದ್ರ ಆಗ್ರಹಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಕಿ-ಅಂಶಗಳ ಸಮೇತ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಹೇಳುವಂತೆ, ಇತ್ತೀಚೆಗೆ ಮಂಡಿಸಲಾದ ರಾಜ್ಯದ ಆಯವ್ಯಯ ಪತ್ರವೇ ಕರ್ನಾಟಕದ ಆರ್ಥಿಕ ಸ್ಥಿತಿಯ ಸಂಪೂರ್ಣ ಚಿತ್ರಣ ನೀಡುತ್ತದೆ. “ಇದು ಕೇವಲ ಅಂಕಿ-ಅಂಶಗಳ ಕಾಗದದ ಕಂತೆ ಅಲ್ಲ, ಏಳು ಕೋಟಿ ಕನ್ನಡಿಗರಿಗೆ ಒಪ್ಪಿಸಿರುವ ಪ್ರಾಮಾಣಿಕ ಲೆಕ್ಕಪತ್ರ,” ಎಂದು ತಿಳಿಸಿದ್ದಾರೆ. ವಿಧಾನಮಂಡಲದಲ್ಲಿ ಅಂಗೀಕಾರಗೊಂಡಿರುವ ಬಜೆಟ್‌ವೇ ನಮ್ಮ ಶ್ವೇತಪತ್ರ ಎಂದು ಸಿಎಂ ಸ್ಪಷ್ಟಪಡಿಸಿದ್ದು, ಇನ್ನೂ ಯಾವುದೇ ಅನುಮಾನಗಳಿದ್ದರೆ ವಿವರಿಸಲು ಸಿದ್ಧ ಎಂದು ಹೇಳಿದ್ದಾರೆ.