ಬೆಂಗಳೂರು: ವಿಬಿಜಿ ರಾಮ್ ಜಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದು ಗೊಳಿಸಬೇಕು. ಮನರೇಗಾ ಯೋಜನೆ ಮರುಜಾರಿ ಗೊಳಿಸಬೇಕು. ಜನರ ಉದ್ಯೋಗದ ಹಕ್ಕನ್ನು ಮರು ಸ್ಥಾಪಿಸಬೇಕು, ಪಂಚಾಯಿಗಳ ಅಧಿಕಾರ ಪುನರ್ ಸ್ಥಾಪನೆಯಾಗಬೇಕು. ದೇಶಾದ್ಯಂತ ಕನಿಷ್ಠ 400 ರೂ.ಗಳ ವೇತನ ನೀಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಡಿಸಿದ್ದಾರೆ.
ಅವರು ವಿಧಾನಸಭಾ ಕಲಾಪದಲ್ಲಿ ವಿಬಿಜಿ ರಾಮ್ ಜಿ ಯೋಜನೆ ಕುರಿತು ನಿರ್ಣಯ ಮಂಡಿಸಿ ಮಾತನಾಡಿದರು.
ಮನರೇಗಾ ಅಡಿಯಲ್ಲಿ ಎಲ್ಲಾ ವರ್ಗದ ಜನರಿಗೆ ಕೆಲಸವಿತ್ತು. ಮನರೇಗಾ ಬರುವ ಮುನ್ನ ಕೆಲಸ ಹುಡುಕಿಕೊಂಡು ಜನ ವಲಸೆ ಹೋಗುತ್ತಿದ್ದರು. ಬೇಡಿಕೆಗೆ ಅನುಸಾರವಾಗಿ ಕೆಲಸ ಒದಗಿಸಲಾಗುತ್ತಿತ್ತು. ಆದರೆ ವಿಬಿಜಿ ರಾಮ್ ಜಿ ಪ್ರಕಾರ ಕೇಂದ್ರ ಸರ್ಕಾರ ಕೆಲಸ ಎಲ್ಲಿ ನೀಡಬೇಕೆಂದು ತೀರ್ಮಾನಿಸುತ್ತದೆ. ಸಂವಿಧಾನದ 73/74 ತಿದ್ದುಪಡಿಯ ಪ್ರಕಾರ ವಿಕೇಂದ್ರೀಕರಣದಡಿ ಗ್ರಾಮ ಸಭೆಯಲ್ಲಿ ಎಲ್ಲಿ ಕೆಲಸವಾಗಬೇಕೆಂದು ತೀರ್ಮಾನವಾಗುತ್ತಿತ್ತು.ಈಗ ಅದಕ್ಕೆ ತಿಲಾಂಜಲಿ ಇಡಲಾಗಿದೆ ಎಂದರು.
ಗ್ರಾಮಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಯುತವಾಗಬೇಕು. ಕರ್ನಾಟಕದಲ್ಲಿ 71.18 ಲಕ್ಷ ಕಾರ್ಮಿಕರಿದ್ದಾರೆ. ಈ ಪೈಕಿ 51% ಗಿಂತ ಹೆಚ್ಚು ಮಹಿಳೆಯರು ಇದ್ದಾರೆ. ಮನರೇಗಾದಿಂದ ಕೋವಿಡ್- 19 ರ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ಸಹಾಯವಾಯಿತು. ಈಗ ವರ್ಷದಲ್ಲಿ 60 ದಿನ ಕೆಲಸವಿಲ್ಲ. ಕೃಷಿ ಚಟುವಟಿಕೆಗಳು ಇದ್ದ ಸಂದರ್ಭದಲ್ಲಿ ಕೆಲಸಗಳಿಲ್ಲ. ಮನರೇಗಾ ಅಡಿಯಲ್ಲಿ ಕೃಷಿ ಚಟುವಟಿಕೆಗಳಿದ್ದಾಗಲೂ ಕೆಲಸ ಮಾಡಬಹುದಾಗಿತ್ತು. ಗುತ್ತಿಗೆದಾರರಿಗೆ ನಿಷೇಧವಿತ್ತು. ಮನರೇಗಾ ಕಾಯ್ದೆಯಲ್ಲಿ ಗುತ್ತಿಗೆ ಎಂಬ ಪದವೇ ಇಲ್ಲ. ಈಗ ಎಲ್ಲಾ ಗುತ್ತಿಗೆದಾರರು ಪ್ರವೇಶ ಮಾಡಬಹುದಾಗಿದೆ. ಸೇತುವೆ, ಹೆದ್ದಾರಿ, ಮುಂತಾದ ದೊಡ್ಡ ಕೆಲಸಗಳಿಗೆ ಜನ ಹೋಗಬೇಕಾಗುತ್ತದೆ. ಪಂಚಾಯತಿಗಳಿಗೆ ಕೊಟ್ಟಿದ್ದ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ ಎಂದು ವ್ಯತ್ಯಾಸಗಳನ್ನು ವಿವರಿಸಿದರು.
ವಿಬಿಜಿ ರಾಮ್ ಜಿ ಕಾಯ್ದೆಯ ದುಷ್ಪರಿಣಾಮಗಳೆಂದರೆ: ನಿರುದ್ಯೋಗದ ಪ್ರಮಾಣ ಹೆಚ್ಚಳವಾಗುತ್ತದೆ, ಉದ್ಯೋಗದಲ್ಲಿ ಮಹಿಳೆಯರ ಪಾಲುದಾರಿಕೆ ಇಳಿಕೆಯಾಗುತ್ತದೆ. ಕನಿಷ್ಠ ವೇತನದ ರಕ್ಷಣೆ ಇಲ್ಲದೆ ಕಾರ್ಮಿಕರು ಸಂಕಷ್ಟಕ್ಕೆ ತಳ್ಳಲ್ಪಡುತ್ತಾರೆ. ದಲಿತ ಮತ್ತು ಆದಿವಾಸಿಗಳ ಕುಟುಂಬಗಳ ಮೇಲೆ ಅಧಿಕ ಒತ್ತಡ ಸೃಷ್ಟಿಯಾಗುತ್ತದೆ. ಗ್ರಾಮೀಣಾಭಿವೃದ್ಧಿಗೆ, ಗ್ರಾಮೀಣ ಬದುಕಿಗೆ ಮಾರಕವಾದ ಕಾಯ್ದೆ ಎಂದು ಆಪಾದಿಸಿದರು.