ಬೆಂಗಳೂರಿನ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 23 ವರ್ಷದ ಅಭಿಷೇಕ್ ಎಂಬ ಯುವಕ ಪ್ರೀತಿಸಿದ ಯುವತಿಯಿಂದ ವಂಚನೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹಿಂದೆ ಯುವತಿಯ ಪೋಷಕರು ಅಭಿಷೇಕ್ ವಿರುದ್ಧ ದೂರು ನೀಡಿದ್ದಾಗ, ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ಮಾಡಿಸಲಾಗಿತ್ತು. ಆದರೆ, ಆ ಬಳಿಕ ಇಬ್ಬರೂ ಮನೆಯವರಿಗೆ ತಿಳಿಯದಂತೆ ರಹಸ್ಯವಾಗಿ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಯುವತಿಯು ತನ್ನನ್ನು ಕಡೆಗಣಿಸುತ್ತಿದ್ದಾಳೆಂಬ ಕಾರಣಕ್ಕೆ ಮನನೊಂದ ಅಭಿಷೇಕ್, ಆಕೆಗೆ ವಿಡಿಯೋ ಕಾಲ್ ಮಾಡಿ ತಾನು ಸಾಯುತ್ತಿರುವುದಾಗಿ ತಿಳಿಸಿ ಪ್ರಾಣ ಕಳೆದುಕೊಂಡಿದ್ದಾನೆ.
ಸಾಯುವ ಮುನ್ನ ಅಭಿಷೇಕ್ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ತಮ್ಮ ಮದುವೆಯ ವಿಚಾರ ಹಾಗೂ ಯುವತಿಯಿಂದಾದ ನೋವಿನ ಬಗ್ಗೆ ಉಲ್ಲೇಖಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಕಾಲ್ ಸಂಭಾಷಣೆ ಮತ್ತು ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳು ಲಭ್ಯವಾಗಿದ್ದು, ಇವುಗಳನ್ನು ಪೊಲೀಸರು ಸಾಕ್ಷ್ಯವಾಗಿ ಪರಿಗಣಿಸಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮೃತನ ಡೆತ್‌ನೋಟ್ ಆಧಾರದ ಮೇಲೆ ಯುವತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಒಟ್ಟಿನಲ್ಲಿ ಪ್ರೀತಿ ಹಾಗೂ ದಾಂಪತ್ಯದ ಕಲಹವೊಂದು ಯುವಕನ ಬಲಿ ಪಡೆದಂತಾಗಿದೆ.