2026-04-24 01:38:32

Car Accident | ಕಾರು ಡಿಕ್ಕಿ ಹೊಡೆದಿದ್ದಲ್ಲದೇ ಪ್ರಶ್ನಿಸಿದವರ ಮೇಲೆ ಭೀಕರ ಹಲ್ಲೆ ಬಿಜೆಪಿ ಪುಡಾರಿಯ ಅಟ್ಟಹಾಸ | Speed News Kannada

Car Accident | ಕಾರು ಡಿಕ್ಕಿ ಹೊಡೆದಿದ್ದಲ್ಲದೇ ಪ್ರಶ್ನಿಸಿದವರ ಮೇಲೆ ಭೀಕರ ಹಲ್ಲೆ ಬಿಜೆಪಿ ಪುಡಾರಿಯ ಅಟ್ಟಹಾಸ | Speed News Kannada

ತುಮಕೂರು: ಬಿಜೆಪಿ ಮುಖಂಡನೊಬ್ಬ ಕಾರು ಡಿಕ್ಕಿ ಹೊಡೆದಿದ್ದನ್ನು ಪ್ರಶ್ನಿಸಿದ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಾತನನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ನಡೆದ ಈ ದೌರ್ಜನ್ಯ ತಡವಾಗಿ ಬೆಳಕಿಗೆ ಬಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಿಪಟೂರು ನಗರದ ಸಿಗ್ನಲ್ ಬಳಿ ಏಪ್ರಿಲ್ 1ರಂದು ಈ ಘಟನೆ ಸಂಭವಿಸಿದೆ. ಬಳ್ಳಕಟ್ಟೆ ಗ್ರಾಮದ ಅಭಿಷೇಕ್ ಎಂಬ ಯುವಕ ತನ್ನ ತಾತನನ್ನು ಹೊತ್ತೊಯ್ಯುತ್ತಿದ್ದ ಆಂಬುಲೆನ್ಸ್ ಹಿಂದೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಬಿಜೆಪಿ ಮುಖಂಡ ಹಾಗೂ ಮಾಜಿ ನಗರಸಭಾ ಸದಸ್ಯ ಪ್ರಸನ್ನ ಕುಮಾ‌ರ್ ಅವರ ಕಾರು ಅಭಿಷೇಕ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಅಭಿಷೇಕ್ ಕಾಲಿಗೆ ಗಾಯವಾಗಿದ್ದು, ಅವರು ಕಾರಿನಲ್ಲಿದ್ದ ಮುಖಂಡನನ್ನು ಪ್ರಶ್ನಿಸಿದ್ದಾರೆ.
ಇದರಿಂದ ಆಕ್ರೋಶಗೊಂಡ ಪ್ರಸನ್ನ ಕುಮಾರ್, ತಮ್ಮ ಬೆಂಬಲಿಗರನ್ನು ಸ್ಥಳಕ್ಕೆ ಕರೆಸಿಕೊಂಡು ಯುವಕನ ಮೇಲೆ ರಸ್ತೆಯಲ್ಲೇ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಭಿಷೇಕ್ ಕ್ಷಮೆ ಕೇಳಿದರೂ ಬಿಡದೆ ಹಿಗ್ಗಾಮುಗ್ಗಾ ಥಳಿಸಿದ ಮುಖಂಡನ ಅಟ್ಟಹಾಸ ಇಲ್ಲಿಗೇ ನಿಂತಿಲ್ಲ. ಗಾಯಗೊಂಡ ಯುವಕನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ, ಅಲ್ಲಿಗೂ ನುಗ್ಗಿದ ತಂಡ ಮತ್ತೆ ಹಲ್ಲೆ ಮುಂದುವರಿಸಿದೆ ಎಂದು ಗಂಭೀರವಾಗಿ ಆರೋಪಿಸಲಾಗಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಅಭಿಷೇಕ್ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪ್ರಸನ್ನ ಕುಮಾರ್ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗಿದ್ದರೂ, ಘಟನೆ ನಡೆದು ವಾರ ಕಳೆದರೂ ಪೊಲೀಸರು ಆರೋಪಿಗಳನ್ನು ಬಂಧಿಸದಿರುವುದು ದಲಿತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯ ಪ್ರಭಾವಕ್ಕೆ ಮಣಿಯದೆ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.