ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವು ಅಲಿಯಾಸ್ ಶಿವಕುಮಾರ್ ಅವರ ಕೊಲೆ ಪ್ರಕರಣದ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು ಅವರನ್ನು ಫೆ.21ರವರೆಗೆ ಸಿಐಡಿ ವಶಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಕಳೆದ ಎರಡು ದಿನಗಳಿಂದ ಹೃದಯ ಸಂಬಂಧಿ ಸಮಸ್ಯೆಗೆ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೈರತಿ ಬಸವರಾಜ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ನಿನ್ನೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.
ನಿನ್ನೆ 42ನೇ ಎಸಿಜೆಎಂ ಕೋರ್ಟ್ ನ್ಯಾಯಾಧೀಶರು 9 ಕಾರಣಗಳನ್ನು ಉಲ್ಲೇಖಿಸಿ, ಹೆಚ್ಚಿನ ವಿಚಾರಣೆ ಸಂಬಂಧ ಆರೋಪಿಯನ್ನು 9 ದಿನ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಫೆಬ್ರುವರಿ 21ರವರೆಗೆ ಸಿಐಡಿ ವಶಕ್ಕೆ ನೀಡಿ ಆದೇಶಿಸಿದರು.
ಇದೇ ವೇಳೆ ಆರೋಪಿ ಪರ ವಕೀಲರು, ವಿಚಾರಣೆ ವೇಳೆ ತಮ್ಮ ಕಕ್ಷಿದಾರರಿಗೆ ಮನೆ ಊಟಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಅದಕ್ಕೆ ಸಿಐಡಿ ಪರ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ್ ನಾಯಕ್ ಆಕ್ಷೇಪಿಸಿದ ಕಾರಣ, ಮನೆ ಊಟ ಸಂಬಂಧ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ನ್ಯಾಯಾಧೀಶರು ಸೂಚಿಸಿದರು.
ಭೈರತಿ ಬಸವರಾಜ್ ನಿವಾಸಕ್ಕೆ ಬಿಜೆಪಿ ನಾಯಕ ದಂಡು:
ಭೈರತಿ ಬಸವರಾಜ್ ನಿವಾಸಕ್ಕೆ ಬಿಜೆಪಿ ನಾಯಕರು ತಂಡೋಪತಂಡವಾಗಿ ಭೇಟಿ ನೀಡುತ್ತಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಸಂಸದ ಗೋವಿಂದ ಕಾರಜೋಳ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ಸೇರಿದಂತೆ ಅನೇಕ ಮುಖಂಡರು ಬೇಟಿ ನೀಡಿ ಭೈರತಿ ಬಸವರಾಜ್ ಕುಟುಂಬದವರಿಗೆ ಧೈರ್ಯ ತುಂಬಿದರು. ಇಂದೂ ಸಹ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಭೇಟಿ ನೀಡಿ ಕುಟುಂಬದ ಜತೆ ಪಕ್ಷ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಪ್ರಕರಣದ ಹಿನ್ನೆಲೆ: 2025ರ ಜುಲೈ 15ರಂದು ರೌಡಿಶೀಟರ್ ಬಿಕ್ಲು ಶಿವು ಕೊಲೆ ನಡೆದಿತ್ತು. ಆ ಕೊಲೆ ಪ್ರಕರಣದಲ್ಲಿ ಬಸವರಾಜ ಅವರು ಐದನೇ ಆರೋಪಿ ಆಗಿದ್ದಾರೆ. ಶಿವು ಅವರ ತಾಯಿ ನೀಡಿದ ದೂರಿನ ಮೇರೆಗೆ ಸಿಐಡಿ ತನಿಖೆ ನಡೆಯುತ್ತಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಮಂದಿಯನ್ನು ಬಂಧಿಸಲಾಗಿದೆ.